ಕೊಡಗಿನ ಅಭಿಜ್ಞಾನ್‍ಗೆ ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿ

Update: 2019-10-23 18:06 GMT

ಮಡಿಕೇರಿ, ಅ.23: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬಳ್ಳಾರಿ ನಗರದಲ್ಲಿ ನಡೆದ ರಾಜ್ಯ ಮಟ್ಟದ ಯುವ ವಿಜ್ಞಾನಿ ಸಮಾವೇಶದಲ್ಲಿ ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ 9 ನೇ ತರಗತಿ ವಿದ್ಯಾರ್ಥಿ ಬಿ.ಸಿ.ಅಭಿಜ್ಞಾನ್ ರಾಜ್ಯ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿ ಗಳಿಸುವುದರೊಂದಿಗೆ ಕೊಡಗು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.   

ಶಾಲೆಯ ವಿಜ್ಞಾನ ಶಿಕ್ಷಕಿ ಬಿ.ವೀಣಾ ಅವರ ಮಾರ್ಗದರ್ಶನದಲ್ಲಿ ‘ಗುರುತ್ವಾಕರ್ಷಣೆ ಬಲದಿಂದ ವಿದ್ಯುತ್ ಉತ್ಪಾದನೆ’ ಕುರಿತು ನಾವೀಣ್ಯತೆ ಮತ್ತು ಸಂಶೋಧನಾತ್ಮಕವಾಗಿ ತಯಾರಿಸಿದ ವಿಜ್ಞಾನ ಮಾದರಿಯೊಂದಿಗೆ ಉತ್ತಮ ಪ್ರದರ್ಶನ ನೀಡಿ ವೈಜ್ಞಾನಿಕ ಮಾಹಿತಿ ನೀಡಿದ ವಿದ್ಯಾರ್ಥಿ ಅಭಿಜ್ಞಾನ್‍ಗೆ ಯುವ ವಿಜ್ಞಾನ ಪ್ರಶಸ್ತಿ ಬಂದಿದೆ. ರಾಜ್ಯ ಮಟ್ಟದ ಸಮಾವೇಶದ ಅಂತಿಮ ಆಯ್ಕೆಯಲ್ಲಿ ಒಟ್ಟು 92 ವಿದ್ಯಾರ್ಥಿಗಳ ಪೈಕಿ ಉತ್ತಮ ಪ್ರದರ್ಶನ ನೀಡಿದ ಅಭಿಜ್ಞಾನ್ ಸೇರಿದಂತೆ 4 ಮಂದಿ ಯುವ ವಿಜ್ಞಾನಿಗಳಾಗಿ ಹೊರಹೊಮ್ಮಿದ್ದಾರೆ. 

ಅಭಿಜ್ಞಾನ್ ಸೇರಿದಂತೆ 4 ಮಂದಿ ಯುವ ವಿಜ್ಞಾನಿಗಳಿಗೆ ತಲಾ ರೂ.10 ಸಾವಿರ ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗಿದೆ.

ವಿದ್ಯಾರ್ಥಿ ಅಭಿಜ್ಞಾನ್, ಮಡಿಕೇರಿ ನಗರದ ನಿವಾಸಿ, ಸಿವಿಲ್ ಕಂಟ್ರಾಕ್ಟರ್ ಬಲ್ಲಡ್ಕ ಆರ್.ಚಂದನ್ ಮತ್ತು ಉಪನ್ಯಾಸಕಿ ಕೆ.ಸಿ.ಹೇಮಾ  ದಂಪತಿಯ ಪುತ್ರರಾಗಿದ್ದಾರೆ.

ಯುವ ವಿಜ್ಞಾನ ಪ್ರಶಸ್ತಿಗೆ ಭಾಜನರಾದ ಅಭಿಜ್ಞಾನ್ ಅವರನ್ನು ಡಿಡಿಪಿಐ ಪಿ.ಎಸ್.ಮಚ್ಚಾಡೋ, ಡಿಡಿಪಿಯು ಜಿ.ಕೆಂಚಪ್ಪ, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಸರಸ್ವತಿ ಹಾಗೂ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಅಧ್ಯಕ್ಷ ಫಿಲಿಪ್ ವಾಸ್ ಮತ್ತು ಪದಾಧಿಕಾರಿಗಳು, ಶಿಕ್ಷಕರ ಸಂಘಟನೆಗಳ ಪ್ರಮುಖರು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News