ಇವಿಎಂ-ವಿವಿಪ್ಯಾಟ್ ತಿರುಚುವ ಸಾಧ್ಯತೆ: ಚುನಾವಣಾ ಆಯೋಗದಿಂದ ತನಿಖೆ

Update: 2019-10-24 04:34 GMT

ಹೊಸದಿಲ್ಲಿ, ಅ.24: ಇವಿಎಂ-ವಿವಿಪ್ಯಾಟ್ ಯಂತ್ರಗಳನ್ನು ಹ್ಯಾಕ್ ಮಾಡಲು ಸಾಧ್ಯ ಎಂಬುದರ ಕುರಿತು ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಎತ್ತಿದ ಹಲವು ಪ್ರಶ್ನೆಗಳು ಹಾಗೂ ಸಂಶಯಗಳ ಕುರಿತಂತೆ ಚುನಾವಣಾ ಆಯೋಗ ತನಿಖೆ ನಡೆಸಲು ಮುಂದಾಗಿದೆ.

2019ರ ಲೋಕಸಭಾ ಚುನಾವಣೆ ವೇಳೆ ಚುನಾವಣಾ ಅಧಿಕಾರಿಯಾಗಿದ್ದ ಗೋಪಿನಾಥನ್ ಅಕ್ಟೋಬರ್ 2ರಂದು ಚುನಾವಣಾ ಆಯೋಗಕ್ಕೆ ಒಂಬತ್ತು ಪುಟಗಳ ಪತ್ರ ಬರೆದು ಇವಿಎಂ-ವಿವಿಪ್ಯಾಟ್ ಯಂತ್ರಗಳ ತಾಂತ್ರಿಕ ಲೋಪದೋಷಗಳತ್ತ ಬೆಳಕು ಚೆಲ್ಲಿದ್ದರು. ಇದೀಗ ಚುನಾವಣಾ ಆಯೋಗದ ನಾಲ್ಕು ಸದಸ್ಯರ ತಾಂತ್ರಿಕ ತಜ್ಞರ ಸಮಿತಿ ಈ ಕುರಿತಂತೆ ಪರಿಶೀಲಿಸುತ್ತಿದೆ.

 "ಪ್ರೊ ಡಿ ಟಿ. ಶಹಾನಿ, ಪ್ರೊ ರಜತ್ ಮೂನಾ, ಪ್ರೊ ದಿನೇಶ್ ಶರ್ಮ ಹಾಗೂ ಪ್ರೊ ಎ.ಕೆ. ಅಗರ್ವಾಲ್ ಅವರನ್ನೊಳಗೊಂಡ ತಾಂತ್ರಿಕ ತಜ್ಞರ ಸಮಿತಿ ಯಾರೇ ಎತ್ತಿದ ವಿಚಾರದ ಕುರಿತಂತೆ ಪರಿಶೀಲಿಸುವಂತೆ ಈ ವಿಚಾರವನ್ನೂ ಪರಿಶೀಲಿಸುತ್ತಿದೆ" ಎಂದು ಚುನಾವಣಾ ಆಯೋಗದ ವಕ್ತಾರ ಶೆಫಾಲಿ ಸರನ್ ತಿಳಿಸಿದ್ದಾರೆಂದು www.thequint.com ವರದಿ ಮಾಡಿದೆ.

ಕಣ್ಣನ್ ಗೋಪಿನಾಥನ್ ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ ಕೆಲವೊಂದು ಪ್ರಮುಖ ವಿಚಾರಗಳನ್ನು ಎತ್ತಿದ್ದರು.

►ವಿವಿಪ್ಯಾಟ್ ಉಪಯೋಗಿಸಲು ಆರಂಭಿಸುವುದಕ್ಕಿಂತ ಮುನ್ನ ಬ್ಯಾಲೆಟ್ ಯುನಿಟ್ ಹಾಗೂ ಕಂಟ್ರೋಲ್ ಯುನಿಟ್ ಇದ್ದ ಇವಿಎಂ ಯಂತ್ರಕ್ಕೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಯಾವ ಅಭ್ಯರ್ಥಿ ಅಥವಾ ಯಾವ ಪಕ್ಷ ಯಾವ ಕ್ರಮ ಸಂಖ್ಯೆಯಲ್ಲಿದೆ ಎಂದು ತಿಳಿದಿರಲಿಲ್ಲ ಆದರೆ ವಿವಿಪ್ಯಾಟ್ ಯಂತ್ರದಲ್ಲಿ ಅಳವಡಿಸಬಹುದಾದ ಪ್ರೋಗ್ರಾಂ ಮೂಲಕ ಪ್ರತಿ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಕ್ರಮಸಂಖ್ಯೆಯನ್ನು ವಿವಿಪ್ಯಾಟ್ ಮೆಮೊರಿ ಮೂಲಕ ಪಡೆಯಬಹುದಾಗಿದ್ದು, ಮತದಾನದ ದಿನ ಮತ ಎಣಿಕೆ ಮಾಡುವ ಇವಿಎಂ ಯಂತ್ರದ ಕಂಟ್ರೋಲ್ ಯುನಿಟ್ ನಲ್ಲಿ ಸಂಗ್ರಹವಾಗಿರುವುದನ್ನು ಈ ಮಾಹಿತಿಯನ್ನು ತಿರುಚಲು ಸಾಧ್ಯ ಎಂದು ಗೋಪಿನಾಥನ್ ತಮ್ಮ ಪತ್ರದಲ್ಲಿ ತಿಳಿಸಿದ್ದರು.

►ಓರ್ವ ಮತದಾರ ಒತ್ತಿದ ಮತ ಸರಿಯಾಗಿಯೇ ದಾಖಲಾಗಿದೆ ಎಂದು ಆತನಿಗೆ ಮನವರಿಕೆ ಮಾಡುವ ಉದ್ದೇಶದಿಂದ ವಿವಿಪ್ಯಾಟ್ ಯಂತ್ರವನ್ನು ಮತದಾನದ ವೇಳೆ ಬಳಕೆ ಮಾಡಲಾಗುತ್ತಿದೆಯಾದರೂ ಅದನ್ನು ಕನೆಕ್ಟ್ ಮಾಡಿದ ರೀತಿ ಅದರ ಮೂಲ ಉದ್ದೇಶವನ್ನೇ ಸೋಲಿಸುತ್ತದೆ. ಡಿಸೈನ್ ಕಾನ್ಫಿಗುರೇಶನ್ ನಂತೆ ವಿವಿಪ್ಯಾಟ್ ಯಂತ್ರ ಕಂಟ್ರೋಲ್ ಯುನಿಟ್ ಹಾಗೂ ಬ್ಯಾಲೆಟ್ ಯುನಿಟ್ ನಡುವೆ ಬರುತ್ತದೆ. ಮತ ಮೊದಲು ವಿವಿಪ್ಯಾಟ್ ನಲ್ಲಿ ದಾಖಲಾಗಿ ನಂತರ ಕಂಟ್ರೋಲ್ ಯುನಿಟ್ ಗೆ ಹೋಗುತ್ತದೆ.

"ಮತದಾರ ಒತ್ತಿದ ಗುಂಡಿಯ ಮಾಹಿತಿಯನ್ನೇ ವಿವಿಪ್ಯಾಟ್ ಪ್ರಿಂಟ್ ಮಾಡಿದರೂ ಅದು ಕಂಟ್ರೋಲ್ ಯುನಿಟ್ ಗೆ ಬೇರೆಯದೇ ಆದ ಮಾಹಿತಿ ನೀಡುವ ಸಾಧ್ಯತೆಯಿದೆ" ಎಂದು ಕಣ್ಣನ್ ಗೋಪಿನಾಥನ್ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

► ಸಾರ್ವಜನಿಕ ರಂಗದ ಸಂಸ್ಥೆಗಳಾದ ಬಿಇಎಲ್ ಮತ್ತು ಇಸಿಐಎಲ್ ಸಿದ್ಧಪಡಿಸಿದ ಇವಿಎಂ-ವಿವಿಪ್ಯಾಟ್ ಗಳಲ್ಲಿ ಪಕ್ಷ ಚಿಹ್ನೆ ಹಾಗೂ ಅಭ್ಯರ್ಥಿಗಳ ಹೆಸರು ಅಪ್ಲೋಡ್ ಮಾಡುವ ಕೆಲಸವನ್ನು ಮಾಡುವ ಇಂಜಿನಿಯರುಗಳು ಬಾಹ್ಯ ಸಾಧನಗಳಾದ ಲ್ಯಾಪ್ ಟಾಪ್/ಜಿಗ್ ಇವುಗಳನ್ನು ಮತದಾನಕ್ಕಿಂತ ಎರಡು ವಾರಗಳ ಮುನ್ನ ಬಳಸುತ್ತಾರೆ. "ಈ ಲ್ಯಾಪ್ ಟಾಪ್/ಜಿಗ್ ಮೂಲಕ ಯಾವುದೇ ಮಾಲ್ವೇರ್ ಕೂಡ ಸೇರಿಕೊಂಡಲ್ಲಿ ಇದು ಅಧಿಕಾರಿಗಳಿಗೆ ತಿಳಿಯುವ ಸಾಧ್ಯತೆಯಿಲ್ಲ" ಎಂದು ಗೋಪಿನಾಥನ್ ಹೇಳಿದ್ದಾರೆ.

ಅಣಕು ಮತದಾನ ಉಪಯೋಗಕ್ಕಿಲ್ಲ: "ಚುನಾವಣಾ ದಿನ ಅಣಕು ಮತದಾನವನ್ನು ಚುನಾವಣಾ ಅಧಿಕಾರಿಗಳು ಹಾಗೂ ರಾಜಕೀಯ ಪಕ್ಷಗಳ ಏಜಂಟರ ಸಮ್ಮುಖದಲ್ಲಿ ನಡೆಸಿ 50 ಮತಗಳನ್ನು ಚಲಾಯಿಸಲಾಗುತ್ತದೆ. ಇದನ್ನು ಅರಿತಿರುವ ಹ್ಯಾಕರ್ ಮೊದಲ 50 ಅಥವಾ 100 ಮತಗಳು ಸರಿಯಾಗಿಯೇ ತಾಳೆಯಾಗುವಂತೆ  ಮಾಡಿ ನಂತರ ಮಾಹಿತಿ ತಿರುಚುವ  ಕೆಲಸವನ್ನು ಆರಂಭಿಸುವಂತೆ ಪ್ರೊಗ್ರಾಂ ಅನ್ನು ಸಿದ್ಧಪಡಿಸುವ ಸಾಧ್ಯತೆಯಿದೆ'' ಎಂದು ಗೋಪಿನಾಥನ್ ತಮ್ಮ ಪತ್ರದಲ್ಲಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News