ಮೋದಿ, ಬಿಜೆಪಿ ವರ್ಚಸ್ಸು ಕುಸಿಯುತ್ತಿದೆ: ಮಹಾರಾಷ್ಟ್ರ-ಹರ್ಯಾಣ ಚುನಾವಣಾ ಫಲಿತಾಂಶದ ಬಗ್ಗೆ ಸಿದ್ದರಾಮಯ್ಯ

Update: 2019-10-24 11:52 GMT

ಬೆಂಗಳೂರು, ಅ. 24: ಮಹಾರಾಷ್ಟ್ರ ಮತ್ತು ಹರ್ಯಾಣ ಚುನಾವಣಾ ಫಲಿತಾಂಶವನ್ನು ಗಮನಿಸಿದರೆ ದೇಶದಲ್ಲಿ ಮೋದಿ ಮತ್ತು ಬಿಜೆಪಿ ವರ್ಚಸ್ಸು ಕಡಿಮೆಯಾಗುತ್ತಿದ್ದು, ಇದು ಅವರ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡೂ ರಾಜ್ಯಗಳಲ್ಲಿ ಬಿಜೆಪಿ ಸ್ಥಾನಗಳ ಕಡಿಮೆಯಾಗಿವೆ. ಹರ್ಯಾಣದಲ್ಲಿ ಇತರೆ ಪಕ್ಷಗಳ ಜತೆ ಕಾಂಗ್ರೆಸ್ ಸರಕಾರ ರಚನೆ ಮಾಡಲಿದೆ ಎಂದು ಹೇಳಿದರು.

ಎರಡೂ ರಾಜ್ಯಗಳ ಚುನಾವಣಾ ಸಮೀಕ್ಷೆಗಳಲ್ಲಿ ಬಿಜೆಪಿಗೆ ಭಾರೀ ಬಹುಮತ ಬರುತ್ತದೆ ಎಂದು ಹೇಳಲಾಗಿತ್ತು. ಆದರೆ, ಆ ಸಮೀಕ್ಷೆಗಳು ಹುಸಿಯಾಗಿದ್ದು, ಅವು ಬಿಜೆಪಿ ಪ್ರೇರಿತ ಎಂಬುದು ಸ್ಪಷ್ಟ. ಕಾಂಗ್ರೆಸ್ ಪಕ್ಷಕ್ಕೆ ಸಂಪನ್ಮೂಲ ಕೊರತೆ ಮತ್ತು ಹಲವು ಮುಖಂಡರು ಪಕ್ಷ ತೊರೆದ ಕಾರಣಕ್ಕೆ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ಹೇಳಿದರು.

ಭಾವನಾತ್ಮಕ ವಿಚಾರಗಳ ತಿರಸ್ಕಾರ: ಬಿಜೆಪಿ ತನ್ನ ಸಾಧನೆಗಳನ್ನು ಆಧರಿಸಿ ಮತ ಕೇಳದೆ, ಪಾಕಿಸ್ತಾನ, ಕಾಶ್ಮೀರ ಸೇರಿದಂತೆ ಇನ್ನಿತರ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಯಿತು. ಆದರೆ, ಮತದಾರರನ್ನು ಭಾವನಾತ್ಮಕ ವಿಚಾರಗಳನ್ನು ಸಂಪೂರ್ಣ ತಿರಸ್ಕರಿಸಿದ್ದಾರೆ ಎಂದು ಟೀಕಿಸಿದರು.

ಬಿಜೆಪಿಗೆ ಶೇಕಡಾವಾರು ಮತಗಳು ಕಡಿಮೆಯಾಗಿವೆ. ಕಾಂಗ್ರೆಸ್‌ಗೆ ಶೇಕಡವಾರು ಮತಗಳು ಹೆಚ್ಚಾಗಿವೆ ಎಂದ ಅವರು, ಮಹಾರಾಷ್ಟ್ರದಲ್ಲಿ ಶಿವಸೇನೆ, ಬಿಜೆಪಿಗೆ ಕೈಕೊಟ್ಟರೆ ಅಲ್ಲಿ ಸರಕಾರ ರಚನೆ ಮಾಡಲು ಸಾಧ್ಯವಿಲ್ಲ. ಮಹಾರಾಷ್ಟ್ರದ ಮೂರು ಕ್ಷೇತ್ರಗಳಲ್ಲಿ ನಾನು ಪ್ರಚಾರ ನಡೆಸಿದ್ದು 2 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಜಯಗಳಿಸಿದ್ದಾರೆ ಎಂದು ಹೇಳಿದರು.

ಪಂಚೇಂದ್ರಿಯಗಳಿಲ್ಲದ ಸರಕಾರ: ಕಣ್ಣು, ಕಿವಿ ಸಹಿತ ಪಂಚೇಂದ್ರಿಯಗಳೇ ಇಲ್ಲದ, ಬೇಜವಾಬ್ದಾರಿ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾರಣ ನೆರೆ ಸಂತ್ರಸ್ತರು ಸಂಕಷ್ಟ ಅನುಭವಿಸಬೇಕಾಗಿದೆ. ಕಾಂಗ್ರೆಸ್ ಪಕ್ಷದ ಶಾಸಕರಿರುವ ಕ್ಷೇತ್ರಗಳ ಅನುದಾನವನ್ನು ತಡೆ ಹಿಡಿಯಲಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ಪಾದಯಾತ್ರೆಗೆ ಚಿಂತನೆ

‘ನೆರೆ ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವಲ್ಲಿ ರಾಜ್ಯ ಸರಕಾರದ ವೈಫಲ್ಯವನ್ನು ಖಂಡಿಸಿ ನೆರೆ ಪೀಡಿತ ಜಿಲ್ಲೆಗಳಿಂದ ರಾಜಧಾನಿ ಬೆಂಗಳೂರಿಗೆ ಪಾದಯಾತ್ರೆ ಕೈಗೊಳ್ಳಬೇಕೆಂಬ ಚಿಂತನೆ ಇದೆ, ಈ ಬಗ್ಗೆ ಶೀಘ್ರದಲ್ಲೆ ತೀರ್ಮಾನ ಮಾಡಲಾಗುವುದು’

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News