ಸಿದ್ದು ಕಾಲೆಳೆಯಲು ಹೋಗಿ ಟ್ರೋಲ್ ಆದ ಸಚಿವ ಸುರೇಶ್ ಕುಮಾರ್

Update: 2019-10-24 14:11 GMT

ಬೆಂಗಳೂರು, ಅ.24: ‘ಓ ದೇವರೆ, ರಾಜ್ಯದ ಪ್ರತಿಪಕ್ಷದ ನಾಯಕರು ವಿಧಾನಸಭೆಯ ಅಧಿವೇಶನದ ಸಮಯದಲ್ಲಿ ಸದನದಲ್ಲಿಯಾದರೂ ಮಾನ್ಯ ಸಭಾಧ್ಯಕ್ಷರನ್ನು ಏಕವಚನದಲ್ಲಿ ಸಂಬೋಧಿಸದಂತೆ ಬುದ್ದಿ ಕೊಡು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ವ್ಯಂಗ್ಯ ಮಾಡಿ, ಟ್ವೀಟ್ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದೆ.

ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಡುವೆ ನಡೆದ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅದನ್ನೇ, ಮುಂದಿಟ್ಟುಕೊಂಡು ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದರು.

‘ಕಾಯಂ ಶಿಕ್ಷಕರ/ಉಪನ್ಯಾಸಕರ ನೇಮಕಾತಿ ಮಾಡಲು ಸಾಧ್ಯವಿಲ್ಲ ಎಂದರೆ ಶಿಕ್ಷಣ ಇಲಾಖೆಗೆ ಸಚಿವರು ಏಕೆ ಬೇಕು? ರಾಜ್ಯದಲ್ಲಿ ಮಂಜೂರಾದ ಹುದ್ದೆಗಳಲ್ಲೇ 71,000 ಹುದ್ದೆಗಳು ಖಾಲಿ ಬಿದ್ದಿವೆ, ಹೊಸದಾಗಿ ಸೃಷ್ಟಿ ಮಾಡಿದರೆ ಇನ್ನೂ 70 ಸಾವಿರ ಹುದ್ದೆಗಳು ಸಿಗುತ್ತವೆ. ಆದರೆ ಸರಕಾರ ನೇಮಕಾತಿ ಮಾಡದೆ ಅತಿಥಿ ಶಿಕ್ಷಕರಿಗೆ ಕನಿಷ್ಠ ವೇತನ ನೀಡದೆ ಉಚಿತ ಶಿಕ್ಷಣ ನೀಡುವಂತಾಗಿದೆ ಎಂದು ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಸುದ್ದಿಯನ್ನು ಟ್ಯಾಗ್ ಮಾಡಿ ನೆಟ್ಟಿಗರೊಬ್ಬರು ತಿರುಗೇಟು ನೀಡಿದ್ದಾರೆ.

‘ಓ ದೇವರೆ, ಈ ಬಾರಿಯಾದರೂ ನಮ್ಮ ದೇಶದ ಪ್ರಧಾನ ಸೇವಕರಿಗೆ ವಿದೇಶದಲ್ಲಿರುವ ಸಿರಿವಂತ ಎನ್‌ಆರ್‌ಐಗಳ ಮಧ್ಯೆ, ನಮ್ಮ ರಾಜ್ಯದ ನೆರೆ ಪೀಡಿತರು ಕಾಣುವಂತೆ ಮಾಡು. ಈ ಬಾರಿಯಾದರೂ ನೆರೆಪೀಡಿತರಿಗೆ ದಯೆ ತೋರಿಸು ದೇವರೇ’ ಎಂದು ಒಬ್ಬರು ಪ್ರಾರ್ಥಿಸಿದ್ದಾರೆ.

‘ಓ ಶ್ರೀರಾಮನೇ ರಾಜ್ಯದಲ್ಲಿ ಆಡಳಿತವಿದೆ ಅಂತ ಅವರು ಎಷ್ಟೇ ಭಂಡಗೆಟ್ಟರೂ ಈ ಬಾರಿಯಾದರೂ ಸದನದಲ್ಲಿ ಸೆಕ್ಸ್ ವಿಡಿಯೋ ನೋಡದಂತೆ ಹಾಗೂ ಬಟ್ಟೆಗಳನ್ನು ಬೀದಿ ರೌಡಿಗಳಂತೆ ಸದನದಲ್ಲಿ ಹರಿದುಕೊಂಡು ಕಿರುಚಾಡದಂತೆ ಸ್ವಲ್ಪ ಬುದ್ದಿ ಕೊಡಪ್ಪ’ ಎಂದು ಒಬ್ಬ ನೆಟ್ಟಿಗ ತಿಳಿಸಿದ್ದಾರೆ.

‘ಓ ದೇವರೇ, ನಮ್ಮ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರಕಾರದ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಚಿವರು ಹಾಗೂ ಶಾಸಕರಿಗೆ ಪ್ರವಾಹದಿಂದ ನರಳುತ್ತಿರುವ ಸಂತ್ರಸ್ತರಿಗೆ ಸೂಕ್ತ ಪರಿಹಾರ ರಕ್ಷಣೆ ನೀಡುವಂತೆ ಬುದ್ಧಿ ಕೊಡು ಎಂದು ಕೆಲವರು ಕಾಲೆಳೆದಿದ್ದಾರೆ.

‘ಓ ದೇವರೇ, ನಮ್ಮ ರಾಜ್ಯದ ಮುಖ್ಯಮಂತ್ರಿಗಳಿಗೆ ಪ್ರಧಾನಿಯಿಂದ ನೆರೆ ಪರಿಹಾರ ಕೇಳಲು ಧೈರ್ಯ ಹಾಗೂ ಬುದ್ಧಿಯನ್ನೂ ಕೊಡು. ಹಾಗೂ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡಲು ನಮ್ಮ ಸುರೇಶ್ ಕುಮಾರ್ ಮಿನಿಸ್ಟರ್ ಗೋರ್ಮೆಂಟ್ ಆಫ್ ಕರ್ನಾಟಕ ಅವರಿಗೆ ಸದ್ಬುದ್ಧಿ ಕರುಣಿಸು ಎಂದು ಒಬ್ಬರು ಪ್ರಾರ್ಥಿಸಿದ್ದಾರೆ.

‘ಓ ದೇವರೇ, ಎರಡು ವರ್ಷದ ನಂತರ ಕೆಪಿಎಸ್ಸಿ ವರ ಕೊಟ್ಟರು, ಲಿಸ್ಟ್ ಬಿಟ್ಟು ಆರು ತಿಂಗಳಾದರೂ ಕೆಆರ್‌ಇಐಎಸ್‌ನ ಅಧಿಕಾರಿಗಳು ಮತ್ತು ಇಲಾಖೆಗೆ ಸಂಬಂಧಪಟ್ಟ ಮಂತ್ರಿಗಳು ವರ ಕೊಡುವಂತೆ ಬುದ್ಧಿಕೊಡು. ವಸತಿ ಶಾಲೆಗೆ ಶಿಕ್ಷಕರ ಗೋಳು ಕೇಳುವ ಜನನಾಯಕ ಇಲ್ಲ ಎಂದು ನೆಟ್ಟಿಗರೊಬ್ಬರು ತಿರುಗೇಟು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News