ಉದ್ಯಮಸ್ನೇಹಿ ರಾಷ್ಟ್ರಗಳ ಶ್ರೇಯಾಂಕ: 14 ಸ್ಥಾನ ಮೇಲೇರಿದ ಭಾರತ

Update: 2019-10-24 14:53 GMT

ವಾಷಿಂಗ್ಟನ್, ಅ.24: ವಿಶ್ವಬ್ಯಾಂಕ್ ಗುರುವಾರ ಬಿಡುಗಡೆಗೊಳಿಸಿರುವ ಉದ್ಯಮಸ್ನೇಹಿ ವಾತಾವರಣ ಇರುವ ವಿಶ್ವದ 190 ರಾಷ್ಟ್ರಗಳ ಶ್ರೇಯಾಂಕ ಪಟ್ಟಿಯಲ್ಲಿ ಭಾರತ 14 ಸ್ಥಾನ ಮೇಲೇರಿ 63ನೇ ಸ್ಥಾನದಲ್ಲಿದೆ. ಅಲ್ಲದೆ ಅತ್ಯುತ್ತಮ ಸಾಧನೆ ತೋರಿದ 10 ರಾಷ್ಟ್ರಗಳ ಪಟ್ಟಿಯಲ್ಲಿ ಸತತ ಮೂರನೇ ವರ್ಷ ಸ್ಥಾನ ಪಡೆದಿದೆ.

 ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಯೋಜನೆ ಹಾಗೂ ವಿದೇಶಿ ಹೂಡಿಕೆ ಆಕರ್ಷಿಸಲು ಜಾರಿಗೊಳಿಸಿರುವ ಇತರ ಯೋಜನೆಗಳಿಂದ ಭಾರತದಲ್ಲಿ ಉತ್ತಮ ಉದ್ಯಮಸ್ನೇಹಿ ವಾತಾವರಣವಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಲ್ಲದೆ ಭಾರತ ಉದ್ಯಮಸ್ನೇಹಿ ವಾತಾವರಣ ರೂಪಿಸಲು ಭಾರತ ಶ್ಲಾಘನಾರ್ಹ ಕ್ರಮಗಳನ್ನು ಮುಂದುವರಿಸಿದೆ ಎಂದು 2020ಕ್ಕೆ ಸಂಬಂಧಿಸಿದ ಉದ್ಯಮಸ್ನೇಹಿ ವಾತಾವರಣದ ವರದಿಯಲ್ಲಿ ವಿಶ್ವಬ್ಯಾಂಕ್ ತಿಳಿಸಿದೆ.

2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಸಂದರ್ಭ 190 ರಾಷ್ಟ್ರಗಳಲ್ಲಿ ಭಾರತ 142ನೇ ಸ್ಥಾನದಲ್ಲಿತ್ತು. ಮುಂದಿನ ನಾಲ್ಕು ವರ್ಷ ಸರಕಾರ ಕೈಗೊಂಡ ಹಲವು ಸುಧಾರಣಾ ಕ್ರಮಗಳಿಂದ 2018ರಲ್ಲಿ ವಿಶ್ವಬ್ಯಾಂಕ್ ಬಿಡುಗಡೆಗೊಳಿಸಿದ ಉದ್ಯಮಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 100ನೇ ಸ್ಥಾನಕ್ಕೆ ತಲುಪಿತ್ತು.

(2017ರಲ್ಲಿ 130ನೇ ಸ್ಥಾನದಲ್ಲಿತ್ತು). 2018ರಲ್ಲಿ ದಿವಾಳಿತನ ಕಾನೂನು, ತೆರಿಗೆ ನಿಯಮಕ್ಕೆ ಸಂಬಂಧಿಸಿದ ಸುಧಾರಣೆಗಳಿಂದ 77ನೇ ಸ್ಥಾನಕ್ಕೆ ಜಿಗಿದಿತ್ತು. ಈ ವರ್ಷ ಅತ್ಯುತ್ತಮ ಸಾಧನೆ ತೋರಿದ ಅಗ್ರ 10 ರಾಷ್ಟ್ರಗಳೆಂದರೆ- ಭಾರತ(63ನೇ ಸ್ಥಾನ), ಸೌದಿ ಅರೇಬಿಯಾ(62), ಜೋರ್ಡಾನ್(75), ಟೋಗೊ(97), ಬಹರೈನ್(43), ತಾಜಿಕಿಸ್ತಾನ್(106), ಪಾಕಿಸ್ತಾನ(108), ಕುವೈಟ್(83), ಚೀನಾ (31) ಮತ್ತು ನೈಜೀರಿಯಾ (131).

 ಸತತ ಮೂರನೇ ಬಾರಿ ಅತ್ಯುತ್ತಮ ಸಾಧನೆ ತೋರಿದ 10 ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಭಾರತ ಕಳೆದ 20 ವರ್ಷಗಳಲ್ಲಿ ವಿಶ್ವದ ಕೆಲವೇ ರಾಷ್ಟ್ರಗಳು ಸಾಧಿಸಿದ ದಾಖಲೆಯನ್ನು ಸರಿಗಟ್ಟಿದೆ. ಭಾರತದ ಜನಸಂಖ್ಯೆಯನ್ನು ಗಮನಿಸಿದರೆ ಈ ಸಾಧನೆ ಅತ್ಯುತ್ತಮವಾಗಿದೆ ಎಂದು ವಿಶ್ವಬ್ಯಾಂಕ್‌ನ ಅಭಿವೃದ್ಧಿ ಅರ್ಥಶಾಸ್ತ್ರ ವಿಭಾಗದ ನಿರ್ದೇಶಕ ಸಿಮಿಯೊನ್ ಡ್ಯಾಂಕೋವ್ ಶ್ಲಾಘಿಸಿದ್ದಾರೆ.

    2020ರ ವೇಳೆ ವಿಶ್ವದ ಅಗ್ರ 50 ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ಗುರಿ ಹೊಂದಿರುವುದಾಗಿ 2015ರಲ್ಲಿ ಭಾರತ ಘೋಷಿಸಿತ್ತು. ಈ ಗುರಿ ಸಾಧನೆಗೆ 1 ವರ್ಷ ಬಾಕಿಯಿದ್ದು, ತೀವ್ರ ಪೈಪೋಟಿಯ ಮಧ್ಯೆಯೂ ಭಾರತ ತನ್ನ ಶ್ರೇಯಾಂಕವನ್ನು ಉನ್ನತೀಕರಿಸುತ್ತಾ ಸಾಗುತ್ತಿದೆ. ಆದರೆ 50ರೊಳಗಿನ ಅಥವಾ 25ರೊಳಗಿನ ಪಟ್ಟಿಯಲ್ಲಿ ಸ್ಥಾನ ಪಡೆಯಬೇಕಿದ್ದರೆ ಮೋದಿ ಸರಕಾರ ಈಗಲೇ ತನ್ನ ಮಹಾತ್ವಾಕಾಂಕ್ಷೆಯ ಸುಧಾರಣಾ ಕ್ರಮಗಳನ್ನು ಘೋಷಿಸಿ ಜಾರಿಗೊಳಿಸುವ ಉಪಕ್ರಮ ಆರಂಭಿಸಬೇಕು ಎಂದವರು ಹೇಳಿದ್ದಾರೆ.

  ಭಾರತದಲ್ಲಿ ತೆರಿಗೆ ಪಾವತಿ ಮತ್ತು ಗಡಿಯುದ್ದಕ್ಕೂ ವ್ಯಾಪಾರ ಉತ್ತೇಜಿಸಲು ಹೆಚ್ಚಿನ ಆದ್ಯತೆ ನೀಡಿರುವುದು ಮತ್ತು ಮುಖ್ಯವಾಗಿ ದಿವಾಳಿತನ ಸಂಹಿತೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿರುವುದು ಉದ್ಯಮಸ್ನೇಹಿ ವಾತಾವರಣ ಮೂಡಿಸಲು ಪೂರಕವಾಗಿದೆ. ದಿವಾಳಿತನ ಕಾನೂನು ಜಾರಿಗೆ ಬರುವ ಮುನ್ನ ಸಾಲ ಮರುಪಾವತಿಸದ ಸಂಸ್ಥೆಗಳನ್ನು ಸ್ವಾಧೀನಕ್ಕೆ ಪಡೆಯುವುದು ಸಾಲ ನೀಡಿದ ಸಂಸ್ಥೆಗಳಿಗೆ ಸುಲಭವಾಗಿರಲಿಲ್ಲ. ಆದರೆ ಕಠಿಣ ಕಾನೂನು ಜಾರಿಗೆ ಬಂದ ಬಳಿಕ ಸುಮಾರು 2000ಕ್ಕೂ ಹೆಚ್ಚು ಸಂಸ್ಥೆಗಳು ಹೊಸ ಕಾನೂನನ್ನು ಬಳಸಿಕೊಂಡಿವೆ. ಇದರಲ್ಲಿ ಸುಮಾರು 470 ಸಂಸ್ಥೆಗಳು ಸಮಾಪನಗೊಂಡಿದ್ದರೆ, 120ಕ್ಕೂ ಹೆಚ್ಚಿನ ಸಂಸ್ಥೆಗಳು ಪುನಸ್ಸಂಘಟನೆಯ ಯೋಜನೆಯನ್ನು ಅನುಮೋದಿಸಿದೆ . ಉಳಿದ ಪ್ರಕರಣಗಳು ಇನ್ನಷ್ಟೇ ಇತ್ಯರ್ಥವಾಗಬೇಕಿದೆ ಎಂದು ವರದಿ ತಿಳಿಸಿದೆ.

   ಇದರ ಜೊತೆಗೆ, ಉದ್ಯಮ ಆರಂಭಿಸುವ ಪ್ರಕ್ರಿಯೆಯನ್ನೂ ಭಾರತ ಸರಳೀಕರಿಸಿದೆ. ಡಿಜಿಟಲೀಕರಣ ಪ್ರಕ್ರಿಯೆ ಅಳವಡಿಕೆಯಿಂದ ನವೋದ್ಯಮಗಳಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News