ಎನ್‌ಆರ್‌ಸಿ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ನಡುವೆ ‘ತಪ್ಪು ನಂಟು’: ವಿಶ್ವಸಂಸ್ಥೆಯಲ್ಲಿ ಭಾರತ ಪ್ರತಿಪಾದನೆ

Update: 2019-10-24 16:10 GMT

ವಿಶ್ವಸಂಸ್ಥೆ, ಅ. 24: ಅಸ್ಸಾಮ್‌ನ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ನಡುವೆ ‘ತಪ್ಪಾಗಿ ನಂಟು ಕಲ್ಪಿಸಲಾಗುತ್ತಿರುವುರಿಂದ’ ನಿರಾಶೆಯಾಗಿದೆ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಹೇಳಿದೆ ಹಾಗೂ ‘ಅಸಂಪೂರ್ಣ ತಿಳುವಳಿಕೆ’ಯ ಆಧಾರದಲ್ಲಿ ಯಾರೂ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಅದು ತಿಳಿಸಿದೆ.

ಎನ್‌ಆರ್‌ಸಿ ವಿಚಾರದಲ್ಲಿ ‘ಮಾನವೀಯ ಬಿಕ್ಕಟ್ಟೊಂದು’ ಸೃಷ್ಟಿಯಾಗುವ ಸಾಧ್ಯತೆ ಬಗ್ಗೆ ವಿಶ್ವಸಂಸ್ಥೆಯ ಪರಿಣತರೊಬ್ಬರು ವ್ಯಕ್ತಪಡಿಸಿದ ಆತಂಕಕ್ಕೆ ಭಾರತ ಈ ರೀತಿಯಾಗಿ ಪ್ರತಿಕ್ರಿಯಿಸಿದೆ.

ಎನ್‌ಆರ್‌ಸಿಯು ಶಾಸನಾತ್ಮಕವಾಗಿದೆ, ಪಾರದರ್ಶಕವಾಗಿದೆ ಹಾಗೂ ಸುಪ್ರೀಂ ಕೋರ್ಟ್ ಆದೇಶದಂತೆ ಮತ್ತು ಅದರ ಮೇಲ್ವಿಚಾರಣೆಯಲ್ಲಿ ಅದನ್ನು ಜಾರಿಗೊಳಿಸಲಾಗುತ್ತಿದೆ ಎಂದು ಭಾರತ ಹೇಳಿದೆ.

 ‘‘ಅಸ್ಸಾಮ್ ರಾಜ್ಯದಲ್ಲಿನ ರಾಷ್ಟ್ರೀಯ ನಾಗರಿಕರ ನೋಂದಣಿಯು ಅಲ್ಪಸಂಖ್ಯಾತರ ಹಕ್ಕುಗಳಿಗೆ ಸಂಬಂಧಿಸಿದ ವಿಷಯವಲ್ಲ. ಅದನ್ನು ತಪ್ಪಾಗಿ ಅಲ್ಪಸಂಖ್ಯಾತರ ಹಕ್ಕುಗಳೊಂದಿಗೆ ಜೋಡಿಸುತ್ತಿರುವುದನ್ನು ನೋಡಿ ನಮಗೆ ನಿರಾಶೆಯಾಗಿದೆ. ಭಾರತದ ಅಲ್ಪಸಂಖ್ಯಾತರು ಸಾಂವಿಧಾನಿಕ ಸುರಕ್ಷತೆಗಳನ್ನು ಹೊಂದಿದ್ದಾರೆ. ಈ ಸಾಂವಿಧಾನಿಕ ಸುರಕ್ಷತೆಗಳು ನಮ್ಮ ಮೂಲಭೂತ ಹಕ್ಕುಗಳ ಭಾಗವಾಗಿವೆ’’ ಎಂದು ವಿಶ್ವಸಂಸ್ಥೆಯಲ್ಲಿ ಭಾರತೀಯ ಖಾಯಂ ನಿಯೋಗದ ಪ್ರಥಮ ಕಾರ್ಯದರ್ಶಿ ಪೌಲೋಮಿ ತ್ರಿಪಾಠಿ ಹೇಳಿದರು.

ಮಂಗಳವಾರ ನಡೆದ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯ ಮೂರನೇ ಸಮಿತಿ (ಸಾಮಾಜಿಕ, ಮಾನವೀಯ ಮತ್ತು ಸಾಂಸ್ಕೃತಿಕ)ಯ ಅಧಿವೇಶನದಲ್ಲಿ ಈ ವಾದ ಮಂಡನೆ ನಡೆಯಿತು.

ವಿಶ್ವಸಂಸ್ಥೆಯ ಅಲ್ಪಸಂಖ್ಯಾತ ವಿಷಯಗಳ ವಿಶೇಷ ಪ್ರತಿನಿಧಿ ಫೆರ್ನಾಂಡ್ ಡಿ ವಾರೆನ್ಸ್ ಅಸ್ಸಾಮ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಗರಿಕರ ನೋಂದಣಿಯ ಬಗ್ಗೆ ಪ್ರಸ್ತಾಪಿಸಿದಾಗ ತ್ರಿಪಾಠಿ ಅದಕ್ಕೆ ಉತ್ತರಿಸುತ್ತಿದ್ದರು.

19 ಲಕ್ಷ ಮಂದಿ ಎನ್‌ಆರ್‌ಸಿಯಿಂದ ಹೊರಗೆ

ಸದ್ಯಕ್ಕೆ ಅಸ್ಸಾಮ್‌ನಲ್ಲಿ ಸುಮಾರು 19 ಲಕ್ಷ ಮಂದಿ ರಾಷ್ಟ್ರೀಯ ನಾಗರಿಕರ ನೋಂದಣಿಯಿಂದ ಹೊರಗಿದ್ದಾರೆ. ಅವರು ಇನ್ನು ನಿಯೋಜಿತ ನ್ಯಾಯಮಂಡಳಿಗಳಲ್ಲಿ ಸರಕಾರದ ನಿರ್ಧಾರವನ್ನು ಪ್ರಶ್ನಿಸಬಹುದಾಗಿದೆ. ಅದರಲ್ಲಿ ಯಶಸ್ಸು ಸಿಗದಿದ್ದರೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಿಗೆ ಹೋಗಬಹುದಾಗಿದೆ.

ವಿದೇಶಿಯರು ಎಂದು ಘೋಷಿಸಲ್ಪಡುವ ಅಪಾಯ: ವಿಶ್ವಸಂಸ್ಥೆ ಪರಿಣತ

‘‘ಮುಂಬರುವ ವರ್ಷಗಳು ಹಾಗೂ ತಿಂಗಳುಗಳಲ್ಲಿ ದೇಶವಿಲ್ಲದವರ ಸಂಖ್ಯೆ ಗಣನೀಯವಾಗಿ ಹೆಚ್ಚಬಹುದು ಎಂಬ ಎಚ್ಚರಿಕೆಯನ್ನು ನೀಡಲು ನನಗೆ ಬೇಸರವಾಗುತ್ತಿದೆ’’ ಎಂದು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಮೂರನೇ ಸಮಿತಿಯ ಅಧಿವೇಶನದಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಅಲ್ಪಸಂಖ್ಯಾತ ವಿಷಯಗಳ ವಿಶೇಷ ಪ್ರತಿನಿಧಿ ಫೆರ್ನಾಂಡ್ ಡಿ ವಾರೆನ್ ಹೇಳಿದರು.

‘‘ರಾಷ್ಟ್ರೀಯ ನಾಗರಿಕರ ನೋಂದಣಿಯು ಸಂಭಾವ್ಯ ಮಾನವೀಯ ಬಿಕ್ಕಟ್ಟು, ಅಸ್ಥಿರ ಪರಿಸ್ಥಿತಿಗೆ ಕಾರಣವಾಗಬಹುದು. ಯಾಕೆಂದರೆ ಪ್ರಮುಖವಾಗಿ ಬಂಗಾಳಿ ಮತ್ತು ಮುಸ್ಲಿಮ್ ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದ ಲಕ್ಷಾಂತರ ಜನರನ್ನು ‘ವಿದೇಶಿಯರು ಹಾಗೂ ಅಸ್ಸಾಂ ರಾಜ್ಯದ ನಾಗರಿಕರಲ್ಲ’ ಎಂಬುದಾಗಿ ಘೋಷಿಸುವ ಅಪಾಯವಿದೆ. ಹಾಗಾಗಿ, ಈ ಜನರು ಅಂತಿಮವಾಗಿ ದೇಶವಿಲ್ಲದ ಜನರಾಗಿ ಪರಿವರ್ತನೆಯಾಗಬಹುದು’’ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News