ಆರ್‌ಸಿಇಪಿ ಜಾರಿಯಾದರೆ ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಳ: ಮಾಜಿ ಸಿಎಂ ವೀರಪ್ಪ ಮೊಯ್ಲಿ

Update: 2019-10-25 12:49 GMT

ಬೆಂಗಳೂರು, ಅ.25: ಕೇಂದ್ರ ಸರಕಾರ ಆರ್‌ಸಿಇಪಿ (ಮುಕ್ತ ಆರ್ಥಿಕ ಒಪ್ಪಂದ) ಮೂಲಕ ವಿದೇಶದಿಂದ ಹಾಲು ಹಾಗೂ ಹಾಲಿನ ಉತ್ಪನ್ನ ಆಮದು ಮಾಡಿಕೊಳ್ಳಲು ಮುಂದಾದರೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಲಿವೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಆತಂಕ ವ್ಯಕ್ತಪಡಿಸಿದರು.

ಶುಕ್ರವಾರ ನಗರದ ವಸತಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಈ ತೀರ್ಮಾನದಿಂದ ದೇಶದಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚಾಗಬಹುದು. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೂ ಪತ್ರ ಬರೆದಿದ್ದೇನೆ. ಆದರೆ, ಇವರು ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಹೋಗುವಷ್ಟರಲ್ಲಿ ಎಲ್ಲವೂ ಮುಗಿದು ಹೋಗಿರುತ್ತೆ ಎಂದು ತಿಳಿಸಿದರು.

ವಿದೇಶದಿಂದ ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಒಪ್ಪಂದಕ್ಕೆ ಅಂತಿಮ ಸಹಿ ಹಾಕುವುದಷ್ಟೆ ಬಾಕಿಯಿದೆ. ಒಂದು ವೇಳೆ ಕೇಂದ್ರ ಸರಕಾರ ಸಹಿ ಹಾಕಿದ್ದೇ ಆದಲ್ಲಿ ದೇಶದ ಹೈನುಗಾರಿಕೆ ಸಂಪೂರ್ಣ ನಿರ್ಣಾಮವಾಗಲಿದೆ. ದೇಶದ ರೈತರು ಹೈನುಗಾರಿಕೆಯಿಂದ ಬದುಕು ಸಾಗಿಸುತ್ತಿದ್ದಾರೆ. ದೇಶದಿಂದಲೇ ಹೈನುಗಾರಿಕೆ ಉತ್ಪನ್ನಗಳನ್ನು ರಫ್ತು ಮಾಡುವ ಸಾಮರ್ಥ್ಯ ನಮ್ಮ ದೇಶಕ್ಕಿದೆ. ಸದ್ಯ ಕೇಂದ್ರ ಮಾಡಿಕೊಳ್ಳಲು ಹೊರಟಿರುವ ಒಪ್ಪಂದದಿಂದ ವಿದೇಶದಿಂದ ಆಮದು ಮಾಡಿಕೊಳ್ಳಲೇ ಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಅವರು ಹೇಳಿದರು.

ನ್ಯೂಜಿಲ್ಯಾಂಡ್ ಜನಸಂಖ್ಯೆ 42 ಲಕ್ಷ ಇದ್ದರೆ, ಭಾರತದಲ್ಲಿ 120 ಕೋಟಿ ಇದೆ. 240 ಲಕ್ಷ ಮೆಟ್ರಿಕ್ ಟನ್ ಹಾಲನ್ನು ನ್ಯೂಜಿಲ್ಯಾಂಡ್‌ನಲ್ಲಿ ಉತ್ಪಾದನೆ ಮಾಡಿದರೆ, ಭಾರತದಲ್ಲಿ 1800 ಲಕ್ಷ ಮೆಟ್ರಿಕ್‌ಟನ್ ಉತ್ಪಾದನೆ ಆಗುತ್ತಿದೆ. ಆ ದೇಶದಲ್ಲಿ ಡೈರಿ ರೈತರ ಸಂಖ್ಯೆ ಹತ್ತು ಸಾವಿರ ಮಾತ್ರ, ಭಾರತದಲ್ಲಿ 10 ಕೋಟಿ ರೈತರಿದ್ದಾರೆ. ಹೀಗಾಗಿ ಕೇಂದ್ರದ ಈ ನೀತಿಯಿಂದ ದೇಶದ ರೈತರ ಆರ್ಥಿಕ ಪರಿಸ್ಥಿತಿ ಪತನವಾಗಲಿದೆ ಎಂದು ಅವರು ವಿವರಿಸಿದರು.

ದೇಶದಲ್ಲಿ ಹೈನುಗಾರಿಕೆ ಉತ್ಪಾದನೆಯಲ್ಲಿ ಗುಜರಾತ್ ಮೊದಲನೇ ಸ್ಥಾನದಲ್ಲಿದ್ದರೆ, ಕರ್ನಾಟಕ ದ್ವಿತೀಯ ಸ್ಥಾನದಲ್ಲಿದೆ. ಇಂತಹ ಅನೇಕ ಅಂಶಗಳನ್ನು ಹಾಗೂ ವಾಸ್ತವ ಸ್ಥಿತಿ ಅರಿಯದೇ ಅವಸರದಲ್ಲಿ ಕೇಂದ್ರ ಸರಕಾರ ಈ ತೀರ್ಮಾನ ಮಾಡಿರುವುದು ದುರಂತವೇ ಸರಿ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News