ಎಚ್‌ಡಿಕೆ ವಿರುದ್ಧ ಮಾಜಿ ಸಚಿವ ಎಚ್.ಎಂ.ರೇವಣ್ಣ ಕಿಡಿ: ಕಾರಣ ಏನು ಗೊತ್ತಾ ?

Update: 2019-10-25 16:08 GMT

ಹೊಸದಿಲ್ಲಿ, ಅ.25: ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರದ ಪತನಕ್ಕೆ ಕಾಂಗ್ರೆಸ್ ಪಕ್ಷವಾಗಲಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾರಣರಲ್ಲ. ವಿನಾಕಾರಣ ಅವರ ವಿರುದ್ಧ ಆರೋಪಗಳನ್ನು ಹೊರಿಸುವುದು ಸರಿಯಲ್ಲ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಹೊಸದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆದಿಲ್ಲ. ಈ ಬಗ್ಗೆ ಅವರ ಜೆಡಿಎಸ್ ಪಕ್ಷದ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೂ, ಸಿದ್ದರಾಮಯ್ಯ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದರು.

ಆಡಳಿತ ಪಕ್ಷದಲ್ಲಿದ್ದ ನಮ್ಮ ಯಾವ ಕೆಲಸವನ್ನು ಕುಮಾರಸ್ವಾಮಿ ಮಾಡುತ್ತಿರಲಿಲ್ಲ. ನಮ್ಮ ಜೊತೆ ಚೆನ್ನಾಗಿ ಮಾತನಾಡುತ್ತಿದ್ದರೇ ಹೊರತು, ನಮ್ಮ ಯಾವ ಕೆಲಸವನ್ನು ಮಾಡುತ್ತಿರಲಿಲ್ಲ. ಅವರ ಪಕ್ಷದ ಶಾಸಕರನ್ನೇ ಹಿಡಿದಿಟ್ಟುಕೊಳ್ಳಲು ಕುಮಾರಸ್ವಾಮಿಗೆ ಸಾಧ್ಯವಾಗಿರಲಿಲ್ಲ ಎಂದು ಎಚ್.ಎಂ.ರೇವಣ್ಣ ಹೇಳಿದರು.

ಸಾಮಾಜಿಕ ಜಲಾತಾಣಗಳಲ್ಲಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನಡುವಿನ ಟ್ವೀಟ್ ವಾರ್ ಕುರಿತು ಪ್ರತಿಕ್ರಿಯಿಸಿದ ಜೆಡಿಎಸ್ ಅನರ್ಹ ಶಾಸಕ ಎಚ್.ವಿಶ್ವನಾಥ್, ಮೈತ್ರಿ ಸರಕಾರ ಪತನಕ್ಕೆ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಸಮಾನ ಕಾರಣರು. ಮೈತ್ರಿ ಸರಕಾರ ರಚಿಸುವಾಗ ಕಾಂಗ್ರೆಸ್ ಶಾಸಕರನ್ನು ಸಿದ್ದರಾಮಯ್ಯ ಕೇಳಿರಲಿಲ್ಲ. ಅದೇ ರೀತಿ ಕುಮಾರಸ್ವಾಮಿ ಜೆಡಿಎಸ್ ಶಾಸಕರ ಜೊತೆ ಚರ್ಚೆ ಮಾಡದೆ ಸರಕಾರ ಮಾಡಿದರು. ಪರಸ್ಪರ ಆರೋಪ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News