ಬಿಜೆಪಿ ಗುಂಪುಗಾರಿಕೆಯಿಂದ ಅನರ್ಹ ಶಾಸಕರು ಅತಂತ್ರ: ವಿ.ಎಸ್.ಉಗ್ರಪ್ಪ

Update: 2019-10-25 16:10 GMT

ಬೆಂಗಳೂರು, ಅ.25: ರಾಜ್ಯ ಸರಕಾರ ಹಾಗೂ ಬಿಜೆಪಿ ಪಕ್ಷದಲ್ಲಿನ ಗುಂಪುಗಾರಿಕೆಯಿಂದಾಗಿ ಅನರ್ಹ ಶಾಸಕರು ಅತಂತ್ರವಾಗಿದ್ದು, ಇವರ ಸ್ಥಿತಿ ನನ್ನ ಶತ್ರುಗಳಿಗೂ ಬೇಡ ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ವಿ.ಎಸ್.ಉಗ್ರಪ್ಪ ವ್ಯಂಗ್ಯವಾಡಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ವಿಶ್ವಾಸಕ್ಕೆ ದ್ರೋಹ ಬಗೆದವರಿಗೆ ಎಂತಹ ಕಷ್ಟಗಳು ಬರುತ್ತವೆ ಎಂಬುದಕ್ಕೆ ಈ ಅನರ್ಹ ಶಾಸಕರ ಇಂದಿನ ಪರಿಸ್ಥಿತಿಯೇ ಸ್ಪಷ್ಟ ಉದಾಹರಣೆಯಾಗಿದೆ. ಎಲ್ಲಿಯೂ ಸಲ್ಲದವರಾಗಿ ಅತಂತ್ರವಾಗಿದ್ದಾರೆ ಎಂದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು, ಬಿ.ಎಸ್.ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಈ ಅನರ್ಹ ಶಾಸಕರೇ ಕಾರಣಕರ್ತರಾಗಿದ್ದಾರೆ. ಸಂಪುಟದಲ್ಲಿ ಅನರ್ಹ ಶಾಸಕರಿಗೆ ಸಚಿವ ಸ್ಥಾನಗಳನ್ನು ಮೀಸಲಿಡಲಾಗಿದೆ. ಆದರೆ, ಡಿಸಿಎಂ ಲಕ್ಷ್ಮಣ ಸವದಿ, ಅನರ್ಹ ಶಾಸಕರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಿದ್ದಾರೆ ಎಂದು ಉಗ್ರಪ್ಪ ಟೀಕಿಸಿದರು.

ಬಿಜೆಪಿಯಲ್ಲಿನ ಗುಂಪುಗಾರಿಕೆಯಿಂದಾಗಿ ಯಡಿಯೂರಪ್ಪ ಮಾತನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಒಪ್ಪುವುದಿಲ್ಲ, ಸಂತೋಷ್ ಮಾತಿಗೆ ಯಡಿಯೂರಪ್ಪ ಸಹಮತ ವ್ಯಕ್ತಪಡಿಸುವುದಿಲ್ಲ. ಇವರಿಬ್ಬರೂ ಹೇಳುವ ಮಾತುಗಳನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಈಶ್ವರಪ್ಪ ಒಪ್ಪುವುದಿಲ್ಲ ಎಂದು ಉಗ್ರಪ್ಪ ಕಿಡಿಗಾರಿದರು.

ರಾಜ್ಯದಲ್ಲಿ ಮೈತ್ರಿ ಸರಕಾರ ಪತನಕ್ಕೆ ಕಾರಣಕರ್ತರಾಗಿರುವ ಅನರ್ಹ ಶಾಸಕರನ್ನು ಯಾವುದೇ ಕಾರಣಕ್ಕೂ ಪುನಃ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಪಕ್ಷಕ್ಕೆ ಹಾಗೂ ಜನರ ನಂಬಿಕೆಗಳಿಗೆ ದ್ರೋಹ ಬಗೆದವರಿಗೆ ಮತದಾರರು ತಕ್ಕ ಪಾಠ ಕಲಿಸುತ್ತಾರೆ ಎಂದು ಉಗ್ರಪ್ಪ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News