ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ: ಸಚಿವೆ ಶಶಿಕಲಾ ಜೊಲ್ಲೆ

Update: 2019-10-25 16:51 GMT

ಬೆಂಗಳೂರು, ಅ. 25: ಅಂಗನವಾಡಿ ಕಾರ್ಯಕರ್ತೆಯರು, ಮಿನಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ 2018ರ ಅಕ್ಟೋಬರ್ 1ರಿಂದ ಪೂರ್ವಾನ್ವಯ ಆಗುವಂತೆ ಕ್ರಮವಾಗಿ ಮಾಸಿಕ 2 ಸಾವಿರ ರೂ., 1250 ರೂ. ಹಾಗೂ 1 ಸಾವಿರ ರೂ. ಗೌರವಧನ ಹೆಚ್ಚಳ ಮಾಡಲಾಗಿದೆ ಎಂದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಶುಕ್ರವಾರ ಇಲ್ಲಿನ ವಿಕಾಸಸೌಧದಲ್ಲಿನ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ 1,500 ರೂ.ಗೌರವಧನ ಹೆಚ್ಚಳ ಮಾಡಿದ್ದು, ಜತೆಗೆ ರಾಜ್ಯ ಸರಕಾರ 500 ರೂ.ಹೆಚ್ಚಳ ಮಾಡುವ ಮೂಲಕ, ಕಾರ್ಯಕರ್ತೆಯರಿಗೆ ದೀಪಾವಳಿ ಹಬ್ಬ ಕೊಡುಗೆ ನೀಡಲಾಗಿದೆ ಎಂದು ಹೇಳಿದರು.

2018ರ ಅಕ್ಟೋಬರ್‌ನಲ್ಲೆ ಪ್ರಧಾನಿ ಮೋದಿ ಕಾರ್ಯಕರ್ತೆಯರ ಗೌರವಧನವನ್ನು ಹೆಚ್ಚಳ ಮಾಡಿದ್ದರು. ಆದರೆ ಕೆಲ ತಾಂತ್ರಿಕ ಕಾರಣಗಳಿಂದ ರಾಜ್ಯದಲ್ಲಿ ಜಾರಿಗೆ ಬಂದಿರಲಿಲ್ಲ. ಈ ಸಂಬಂಧ ಆರ್ಥಿಕ ಇಲಾಖೆ ಅನುಮೋದನೆ ಪಡೆದು ಇದೀಗ ರಾಜ್ಯದಲ್ಲಿ 1,28,491 ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವಧನ ಹೆಚ್ಚಳ ಮಾಡಲಾಗಿದೆ ಎಂದರು.

ಕಾರ್ಯಕರ್ತೆಯರಿಗೆ ಪ್ರಸ್ತುತ ಮಾಸಿಕ 8 ಸಾವಿರ ರೂ. ಗೌರವಧನ ಪಡೆಯುತ್ತಿದ್ದು, ನವೆಂಬರ್ ತಿಂಗಳಿಂದ ಅದು 10 ಸಾವಿರ ರೂ.ಗಳಿಗೆ ಹೆಚ್ಚಳವಾಗಲಿದೆ. ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ 6 ಸಾವಿರ ರೂ.ಹಾಗೂ ಸಹಾಯಕಿಯರು 5 ಸಾವಿರ ರೂ. ಗೌರವಧನ ಪಡೆಯಲಿದ್ದಾರೆ ಎಂದು ವಿವರಿಸಿದರು.

ಖಾಲಿ ಹುದ್ದೆಗಳ ಭರ್ತಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನಿವಾರಿಸಲು ಕ್ರಮ ಕೈಗೊಂಡಿದ್ದು, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದ ಅವರು, 48 ಮಂದಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ನೇಮಿಸಿ ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದರು. 33 ಮಂದಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ತರಬೇತಿ ನೀಡಲಾಗಿದ್ದು ಎರಡು ದಿನಗಳಲ್ಲಿ ಸ್ಥಳ ನಿಯುಕ್ತಿಗೊಳಿಸಲಾಗುವುದು ಎಂದ ಅವರು, 628 ಮಹಿಳಾ ಮೇಲ್ವಿಚಾರಕಿಯರಿಗೆ ಉಜಿರೆಯಲ್ಲಿ ತರಬೇತಿ ನೀಡಲಾಗುತ್ತಿದ್ದು, ಶೀಘ್ರವೇ ಅವರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುವುದು ಎಂದು ಹೇಳಿದರು.

ಸಿಬ್ಬಂದಿಗೆ ಭಡ್ತಿ: ಐದು ವಿವಿಧ ಕೇಡರ್‌ಗಳ ಅಧಿಕಾರಿಗಳಿಗೆ ಮುಂಭಡ್ತಿ ನೀಡಲು ನಿರ್ಧರಿಸಿದ್ದು, 104 ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮುಂಭಡ್ತಿ ನೀಡಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಪಟ್ಟಿ ಕಳುಹಿಸಲಾಗಿದೆ ಎಂದರು.

ರಾಜ್ಯದಲ್ಲಿನ ನೆರೆ ಪರಿಸ್ಥಿತಿ ಹಿನ್ನೆಲೆಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶ ಸೇರಿದಂತೆ 1 ಸಾವಿರ ಅಂಗನವಾಡಿ ಕೇಂದ್ರಗಳ ಕಟ್ಟಡ ದುರಸ್ತಿಗೆ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಎರಡನೆ ಹಂತದಲ್ಲಿ ಇನ್ನೂ ಹೆಚ್ಚಿನ ಹಣ ಬಿಡುಗಡೆ ಮಾಡಲಾಗುವುದು ಎಂದರು.

ಅಪೌಷ್ಠಿಕತೆ ನಿವಾರಣೆ: ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಗೆ ಆರೋಗ್ಯ, ಗ್ರಾಮೀಣಾಭಿವೃದ್ಧಿ, ಪೊಲೀಸ್ ಹಾಗೂ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಕೇಂದ್ರದ ‘ಪೋಷಣ್ ಅಭಿಯಾನ’ ಯೋಜನೆಯನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.

ಅಂಗನವಾಡಿ ಕೇಂದ್ರಗಳಿನ್ನು ಹೈಟೆಕ್

‘ಮಕ್ಕಳನ್ನು ಶಿಕ್ಷಣದತ್ತ ಆಕರ್ಷಿಕಲು ಆಟ-ಪಾಠ ಕಲಿಯಲು ಅನುಕೂಲ ಆಗುವಂತೆ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ಪ್ರಾಯೋಕವಾಗಿ ಬೆಳಗಾವಿ ಜಿಲ್ಲೆಯ ನೂರು ಅಂಗನವಾಡಿ ಕೇಂದ್ರಗಳನ್ನು ಹೈಟೆಕ್ ಆಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ’

-ಶಶಿಕಲಾ ಜೊಲ್ಲೆ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News