ವಾಯುಭಾರ ಕುಸಿತದ ಎಫೆಕ್ಟ್: ಮಲೆನಾಡಲ್ಲಿ ಮುಂದುವರಿದ ಮಳೆಯ ಅಬ್ಬರ

Update: 2019-10-25 17:06 GMT

ಶಿವಮೊಗ್ಗ, ಅ. 25: ಅರಬ್ಬಿ ಸಮುದ್ರದ ಪಶ್ಚಿಮ ಭಾಗ ಹಾಗೂ ಲಕ್ಷದ್ವೀಪದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮದಿಂದ ಮಲೆನಾಡಿನಲ್ಲಿ ವರ್ಷಧಾರೆಯ ಅಬ್ಬರ ಮುಂದುವರಿದಿದೆ. ಶುಕ್ರವಾರ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಮಳೆಯಾಯಿತು. ಇದರಿಂದ ನಾಗರಿಕರು ಮತ್ತಷ್ಟು ಸಂಕಷ್ಟ ಅನುಭವಿಸುವಂತಾಯಿತು. 

ಇತ್ತೀಚೆಗೆ ಸುರಿಯುತ್ತಿರುವ ಭಾರಿ ಮಳೆಯಿಂದ, ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ಧಕ್ಕೆಯಾಗಿದೆ. ಇನ್ನೇನು ಮಳೆ ಕಡಿಮೆಯಾಯಿತು ಎನ್ನುಷ್ಟರಲ್ಲಿ, ವಾಯುಭಾರ ಕುಸಿತದಿಂದ ಮಲೆನಾಡಿನಲ್ಲಿ ಮತ್ತೆ ವರ್ಷಧಾರೆ ಚುರುಕುಗೊಂಡಿದೆ. ಇದರಿಂದ ನದಿ, ಹಳ್ಳಕೊಳ್ಳ, ಕೆರೆಕಟ್ಟೆಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ತಗ್ಗುಪ್ರದೇಶಗಳು ಮತ್ತೆ ಜಲಾವೃತವಾಗುವ ಭೀತಿ ಎದುರಾಗಿದೆ. 

ಶಿವಮೊಗ್ಗ ನಗರದಲ್ಲಿ ಬೆಳಗ್ಗೆಯಿಂದ ಆಗಾಗ್ಗೆ ಮಳೆಯಾಗುತ್ತಿದ್ದು, ಸಂಜೆ ವೇಳೆ ಬಿರುಗಾಳಿ ಸಹಿತ ಮಳೆಯಾಯಿತು. ಇದರಿಂದ ನಗರದಲ್ಲಿ ಚಳಿಯ ವಾತಾವರಣ ಮನೆ ಮಾಡುವಂತಾಗಿತ್ತು. 

ಉಳಿದಂತೆ ಸಾಗರ, ಸೊರಬ, ಶಿಕಾರಿಪುರ, ತೀರ್ಥಹಳ್ಳಿ, ಹೊಸನಗರ, ಭದ್ರಾವತಿ, ಕೋಣಂದೂರು, ಆಯನೂರು, ಹೊಳಲೂರು, ಶಿರಾಳಕೊಪ್ಪ, ಆನವಟ್ಟಿ, ರಿಪ್ಪನ್‍ಪೇಟೆ, ಆನಂದಪುರ, ಹೊಳೆಹೊನ್ನೂರು ಮೊದಲಾದೆಡೆ ಮಳೆ ಮುಂದುವರಿದಿರುವ ಮಾಹಿತಿಗಳು ಬಂದಿವೆ. 

ಒಳಹರಿವು ಹೆಚ್ಚಳ: ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮಳೆ ಚುರುಕುಗೊಂಡಿರುವುದರಿಂದ ಜಿಲ್ಲೆಯ ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಶುಕ್ರವಾರದ ಮಾಹಿತಿಯಂತೆ, ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರ ಲಿಂಗನಮಕ್ಕಿ ಡ್ಯಾಂನ ಒಳಹರಿವು 24,985 ಕ್ಯೂಸೆಕ್‍ಗೆ ಏರಿಕೆಯಾಗಿದೆ. 29,915 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. 

ಮುನ್ನೆಚ್ಚರಿಕೆ: ಅರಬ್ಬಿ ಸಮುದ್ರ ಹಾಗೂ ಲಕ್ಷದ್ವೀಪದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ, ಮಲೆನಾಡಿನಲ್ಲಿ ಮುಂದಿನ 24 ಗಂಟೆಗಳ ಅವಧಿಯಲ್ಲಿ ಬಿರುಗಾಳಿ ಸಹಿತ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆಯ ಮೂಲಗಳು ಹೇಳಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News