ಚುನಾವಣಾ ನೀತಿ ಸಂಹಿತೆ ಮುಂದೂಡಿಕೆ: ಸುಪ್ರೀಂ ಆದೇಶದ ಬಳಿಕ ವಿಚಾರಣೆ ಆರಂಭ- ಹೈಕೋರ್ಟ್

Update: 2019-10-25 17:29 GMT

ಬೆಂಗಳೂರು, ಅ.25: ಸುಪ್ರೀಂಕೋರ್ಟ್‌ನಲ್ಲಿ ಅನರ್ಹ ಶಾಸಕರು ಹಾಗೂ ಉಪ ಚುನಾವಣೆ ಬಗ್ಗೆ ನಡೆಯುತ್ತಿರುವ ವಿಚಾರಣೆ ಪೂರ್ಣಗೊಂಡ ನಂತರ ರಾಜ್ಯದಲ್ಲಿ ಉಪಚುನಾವಣೆಯ ಚುನಾವಣಾ ನೀತಿಸಂಹಿತೆ ಮುಂದೂಡಿರುವ ಪ್ರಕರಣದ ವಿಚಾರಣೆ ನಡೆಸಲಾಗುವುದು ಎಂದು ಹೈಕೋರ್ಟ್ ತಿಳಿಸಿದೆ. 

ರಾಜ್ಯದ 15 ಕ್ಷೇತ್ರಗಳಲ್ಲಿ ಘೋಷಣೆಯಾಗಿರುವ ಉಪ ಚುನಾವಣೆಯ ನೀತಿ ಸಂಹಿತೆ ಕೇಂದ್ರ ಚುನಾವಣಾ ಆಯೋಗ ಮುಂದೂಡಿರುವ ಕ್ರಮವನ್ನು ಪ್ರಶ್ನಿಸಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಲ್ಲಿಸಿರುವ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಿತು. ಅರ್ಜಿದಾರರ ಪರ ವಾದಿಸಿದ ವಕೀಲರು, ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ಚುನಾವಣಾ ಆಯೋಗ ಉಪ ಚುನಾವಣೆ ಘೋಷಿಸಿದೆ. ಆದರೆ, ನೀತಿ ಸಂಹಿತೆಯನ್ನು ನವೆಂಬರ್ 11ಕ್ಕೆ ಮುಂದೂಡಿದೆ. ಇದನ್ನು ರದ್ದುಗೊಳಿಸಬೇಕು ಚುನಾವಣಾ ನೀತಿ ಸಂಹಿತೆ ಸೆ.17ರಿಂದಲೇ ಅನ್ವಯವಾಗುವಂತೆ ಆದೇಶ ಹೊರಡಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

ಹಾಗೆಯೇ ಉಪ ಚುನಾವಣೆಯ ದಿನಾಂಕವನ್ನು ಗುರುತಿಸಿದ ಬಳಿಕ ರಾಜ್ಯ ಸರಕಾರವು ನಿಗಮ ಮತ್ತು ಮಂಡಳಿಗೆ ನೇಮಕ ಮಾಡಿದೆ. ಈ ನೇಮಕಗಳನ್ನು ರದ್ದುಗೊಳಿಸಬೇಕು ಎಂದು ತಿಳಿಸಿದರು. ನ್ಯಾಯಾಲಯ ಅರ್ಜಿದಾರರಿಗೆ ಸುಪ್ರೀಂಕೋರ್ಟ್‌ನಲ್ಲಿ ಸದ್ಯ ವಿಚಾರಣೆ ನಡೆಯುತ್ತಿದ್ದು ಇದು ಮುಗಿದ ನಂತರ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿ ವಿಚಾರಣೆ ಮುಂದೂಡಿಕೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News