ದೇಶದ್ರೋಹಿ ಸಾವರ್ಕರ್ ಗೆ 'ಭಾರತ ರತ್ನ' ನೀಡುವುದು ಖಂಡನಾರ್ಹ: ಮಹೇಶ್ ಚಂದ್ರಗುರು

Update: 2019-10-25 17:38 GMT

ಮೈಸೂರು,ಅ.25: ಹಲವು ಬಾರಿ ಬ್ರಿಟೀಷರಿಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟ ದೇಶದ್ರೋಹಿ ಸಾವರ್ಕರ್ ಗೆ ಪ್ರತಿಷ್ಠಿತ “ಭಾರತ ರತ್ನ” ಪ್ರಶಸ್ತಿ ನೀಡಲು ನಿರ್ಣಯಿಸಿರುವುದು ಖಂಡನಾರ್ಹ ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ದಲಿತ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾವರ್ಕರ್ ಅವರಿಗೆ ಭಾರತ ರತ್ನ ನೀಡಲು ಒಲ್ಲದ ಮನಸ್ಸಿನಿಂದ ಸಂಸದ ವಿ.ಶ್ರೀನಿವಾಸಪ್ರಸಾದ್ ಹೇಳಿದ್ದಾರೆ. ದಲಿತ ನಾಯಕ, ಸಾಮಾಜಿಕ ಹೋರಾಟಗಾರ ಅಂದಿನ ಶ್ರೀನಿವಾಪ್ರಸಾದ್‍ ಗೂ ಇಂದಿನ ಬಿಜೆಪಿಯ ಆಕಸ್ಮಿಕ ಸಂಸದ ಶ್ರೀನಿವಾಸಪ್ರಸಾದ್‍ ಗೂ ಬಹಳ ವ್ಯತ್ಯಾಸವಿದೆ ಎಂದು  ಕಿಡಿಕಾರಿದರು.

ಮೂಲನಿವಾಸಿಗಳು ಹಲವಾರು ವರ್ಷಗಳಿಂದ ಶಾಂತಿಯುತವಾಗಿ ಮಹಿಷ ದಸರಾ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಮನುವಾದಿ, ಹಿಂದುತ್ವವಾದಿಗಳಾದ ಸಂಸದ ಪ್ರತಾಪ್ ಸಿಂಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಚಾಮುಂಡಿ ಬೆಟ್ಟದಲ್ಲಿ ಸೆಕ್ಷನ್ 144 ಜಾರಿಗೊಳಿಸಿ ತಡೆ ಹಾಕಿ ಜಯಂತಿಗೆ ಹಿನ್ನಡೆಯುಂಟು ಮಾಡಿದರು. ಆದರೆ ನಮ್ಮ ಹೋರಾಟ ಸಫಲವಾಗಿದ್ದು ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮಹಿಷ ದಸರಾ ಆಚರಣೆ ನಡೆಸಲಾಯಿತು ಎಂದು ತಿಳಿಸಿದರು.

ಎನ್.ಟಿ.ಎಂ.ಎಸ್ ಮಹಿಳಾ ಶಾಲೆ ವಿಚಾರ ಕುರಿತು ಮಾತನಾಡಿದ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು, ಅಂದು ನಗರಕ್ಕೆ ಭೇಟಿ ನೀಡಿದ್ದ ಸ್ವಾಮಿ ವಿವೇಕಾನಂದರು ದಿವಾನ್ ಶೇಷಾದ್ರಿಯವರ ಮನೆಯಲ್ಲಿ ಉಳಿದುಕೊಂಡಿದ್ದರೇ ಹೊರತು ಎನ್.ಟಿ.ಎಂ.ಎಸ್ ಶಾಲೆಯಲ್ಲಿ ಅಲ್ಲ, ಆ ಶಾಲೆ ಕಡೆ ಹೋಗಿಯೂ ಇರಲಿಲ್ಲ. ಹೀಗಿದ್ದರೂ ಬಡ ಹೆಣ್ಣುಮಕ್ಕಳು ಓದುತ್ತಿರುವ ಶಾಲೆಯನ್ನು ತೆರವುಗೊಳಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಇಂದಿನ ರಾಮಕೃಷ್ಣಾಶ್ರಮದ ಶಿಕ್ಷಣ ವ್ಯಾಪಾರಿಕರಣ, ವೈಭೊಗದ ಜೀವನ ಕಂಡಿದ್ದರೆ ಸ್ವಾಮಿ ವಿವೇಕಾನಂದರೇ ಮರುಗುತ್ತಿದ್ದರು ಎಂದು ಹೇಳಿದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸಿದ ಬಿಜೆಪಿಗೆ ಒಕ್ಕಲಿಗರು ಮತ ನೀಡಬಾರದು, ದಲಿತರು ಮುಸ್ಲಿಮರು ಕೋಮುವಾದಿ ಬಿಜೆಪಿಯನ್ನು ತಿರಸ್ಕರಿಸಬೇಕು ಎಂದು ಇದೇ ವೇಳೆ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು, ಪ್ರೊ.ಟಿ.ಎಂ.ಮಹೇಶ್, ಚಿಕ್ಕಂದಾನಿ, ರವೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರತಿ ತಿಂಗಳ ಅಮವಾಸ್ಯೆ ಹಿಂದಿನ ದಿನ ಚಾಮುಂಡಿ ಬೆಟ್ಟದಲ್ಲಿರುವ ಮಹಿಷನಿಗೆ ಪುಷ್ಪಾರ್ಚನೆ ಮಾಡಲು ಮೂಲನಿವಾಸಿಗಳು ನಿರ್ಣಯ ಮಾಡಿದ್ದೇವೆ ಎಂದು ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು ತಿಳಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಿಷ ಮೂಲನಿವಾಸಿಗಳ ದೊರೆ, ಅವರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ. ಹಾಗಾಗಿ ಪ್ರತಿ ತಿಂಗಳ ಅಮವಾಸ್ಯೆ ಹಿಂದಿನ ದಿನ ಮಹಿಷ ಮಹರಾಜನಿಗೆ ಪುಷ್ಪಾರ್ಚನೆ ಮಾಡಿ ನಮಸ್ಕರಿಸಲಾಗುವುದು ಎಂದು ಹೇಳಿದರು. ಅಲ್ಲದೇ ಬೌದ್ಧ ಧರ್ಮ ಪ್ರಚಾರ ಹಿನ್ನಲೆಯಲ್ಲಿ “ಬುದ್ಧನೆಡೆಗೆ ಮರಳಿ ಮನೆಗೆ” ಎಂಬ ಜಾಗೃತಿ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಆಯೋಜಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News