×
Ad

ಮೈಸೂರು: ಪತ್ರಕರ್ತ ವಿಶ್ವೇಶ್ವರ ಭಟ್ ಕ್ಷಮೆಯಾಚನೆಗೆ ಒತ್ತಾಯಿಸಿ ಧರಣಿ

Update: 2019-10-25 23:20 IST

ಮೈಸೂರು,ಅ.25: ಸುತ್ತೂರು ಶ್ರೀಗಳ ವ್ಯಕ್ತಿತ್ವಕ್ಕೆ ಧಕ್ಕೆ ತಂದಿರುವ ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿ ಬಸವ ಬಳಗಗಳ ಒಕ್ಕೂಟ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಧರಣಿ ನಡೆಯಿತು.

ಪ್ರತಿಭಟನಾಕಾರರು ನಗರದ ಗನ್‍ಹೌಸ್ ಬಳಿಯಿರುವ ಬಸವೇಶ್ವರ ವೃತ್ತದಿಂದ ಶುಕ್ರವಾರ ಮೆರವಣಿಗೆ ಹೊರಟು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು. 

ಈ ವೇಳೆ ಪ್ರತಿಭಟನಾಕಾರರು, ಅ.20 ರಂದು ವಿಶ್ವವಾಣಿ ಪತ್ರಿಕೆಯಲ್ಲಿ ಅಂತರಂಗ ಸುದ್ದಿ ಎಂಬ ಅಂಕಣದಲ್ಲಿ “ಪ್ರಭಾವ ಬೀರುವ ಮುನ್ನ ಸುತ್ತೂರು ಶ್ರೀಗಳು ಈ ಸಂಗತಿಗಳನ್ನು ಯೋಚಿಸಲಿ” ಎಂಬ ಶೀರ್ಷಿಕೆಯಡಿ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ನೇಮಕ ಆಗಿರುವ ಡಾ.ಎಂ.ಎನ್.ನಂದೀಶ್ ಹಂಚೆ ಅವರ ಅಯ್ಕೆ ವಿಚಾರದಲ್ಲಿ ಸುತ್ತೂರು ಶ್ರೀಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುವ ಮೂಲಕ ಅನರ್ಹ ವ್ಯಕ್ತಿಗೆ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಸಿಗುವಂತೆ ಮಾಡಿದ್ದಾರೆ ಎಂದು ಬರೆಯಲಾಗಿದೆ. ಇದು ಸತ್ಯಕ್ಕೆ ದೂರವಾದ ಲೇಖನ. ಇದನ್ನು ಒಕ್ಕೊರಲಿನಿಂದ ಖಂಡಿಸುವುದಾಗಿ ತಿಳಿಸಿದರು.

ಈ ವರದಿಯಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಈ ವರದಿಯಿಂದ ಶ್ರೀಗಳ ಭಕ್ತ ಸಮೂಹಕ್ಕೆ ತಪ್ಪು ಮಾಹಿತಿ ರವಾನೆ ಆಗುತ್ತದೆ ಹಾಗೂ ಶ್ರೀಗಳ ಮನಸ್ಸಿಗೆ ಘಾಸಿ ಉಂಟು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಾಜಕ್ಕೆ ಕೊಡುಗೆಗಳನ್ನು ನೀಡುತ್ತಾ ಬಂದಿರುವ ಶ್ರೀಗಳ ವಿರುದ್ಧ ಇಂತಹ ಆರೋಪ ಮಾಡಿ ವಿಶ್ವೇಶ್ವರ ಭಟ್ಟ ಅವರು ತಪ್ಪು ಮಾಡಿದ್ದು, ಈ ಕುರಿತು ಈಗಾಗಲೇ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ತೋಂಟಾದಾರ್ಯ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಎಸ್.ಶಿವಮೂರ್ತಿ ಕಾನ್ಯ, ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಟಿ.ಎಸ್.ಲೋಕೇಶ್, ರಾಜ್ಯ ಘಟಕದ ಅಧ್ಯಕ್ಷ ವರುಣ ಮಹೇಶ್, ಮಾಜಿ ಮೇಯರ್ ದಕ್ಷಿಣಾಮೂರ್ತಿ, ಡಿ.ಕೆ.ನಾಗರಾಜ್, ಜಯಗೌಡ, ಗುರುಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News