ಬಿಎಸ್‌ವೈ ನಂತರ ನಾನೇ ಮುಖ್ಯಮಂತ್ರಿ: ಉಮೇಶ್ ಕತ್ತಿ
Update: 2019-10-26 20:08 IST
ಹುಬ್ಬಳ್ಳಿ, ಅ.26: ಬಿ.ಎಸ್.ಯಡಿಯೂರಪ್ಪ ಅವಧಿ ಮುಗಿದ ಮೇಲೆ ರಾಜ್ಯದ ಮುಖ್ಯಮಂತ್ರಿ ನಾನೇ ಎಂದು ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಉಪಮುಖ್ಯಮಂತ್ರಿ ಅಭ್ಯರ್ಥಿಯಲ್ಲ. ಜನತೆಯ ಬೆಂಬಲದೊಂದಿಗೆ ಬಿ.ಎಸ್.ಯಡಿಯೂರಪ್ಪರವರ ಅಧಿಕಾರದ ಅವಧಿ ಮುಗಿದ ಮೇಲೆ ಮುಖ್ಯಮಂತ್ರಿಯಾಗಲಿದ್ದೇನೆಂದು ತಿಳಿಸಿದರು.
ನನಗೀಗ 58 ವರ್ಷವಷ್ಟೆ. ಇನ್ನು 70 ವರ್ಷದವರೆಗೆ ಅವಕಾಶವಿದೆ. ನಾನು ಏಕಾಂಗಿ ಅಲ್ಲ. ನನ್ನೊಂದಿಗೆ ಬಹಳ ಜನರಿದ್ದಾರೆ. ಎಲ್ಲರ ಆಶೀರ್ವಾದವನ್ನು ಪಡೆದುಕೊಂಡು ಮುಖ್ಯಮಂತ್ರಿಯಾಗುತ್ತೇನೆ. ಅಲ್ಲಿಯವರೆಗೂ ಪಕ್ಷ ಸಂಘಟನೆಯಲ್ಲಿ ತೊಡಗಲಿದ್ದೇನೆಂದು ಅವರು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನನ್ನ ಗುರು. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಆತ್ಮೀಯ ಮಿತ್ರ. ಎಲ್ಲರಿಗೂ ಅವಕಾಶ ಸಿಗಬೇಕು. ಅದೇ ರೀತಿಯಲ್ಲಿ ನಾನು ರಾಜ್ಯದ ಮುಖ್ಯಮಂತ್ರಿ ಆಗಲು ಒಳ್ಳೆಯ ಅವಕಾಶ ಕೂಡಿ ಬರಲಿದೆ ಎಂದು ಅವರು ಹೇಳಿದರು.