ಬಿಡುವು ನೀಡಿದ ಮಳೆ: ಚಿಕ್ಕಮಗಳೂರಿನಾದ್ಯಂತ ಕಳೆಗಟ್ಟಿದ ದೀಪಾವಳಿ

Update: 2019-10-27 13:50 GMT

ಚಿಕ್ಕಮಗಳೂರು, ಅ.27: ಕಳೆದ ಎರಡು ವಾರಗಳಿಂದ ಜಿಲ್ಲೆಯಾದ್ಯಂತ ಆರ್ಭಟಿಸಿ ಜನರನ್ನು ಆತಂಕದಲ್ಲಿ ದಿನಕಳೆಯುವಂತೆ ಮಾಡಿದ್ದ ವರುಣ ರವಿವಾರ ಸಂಪೂರ್ಣವಾಗಿ ಬಿಡುವು ನೀಡಿದ್ದು, ಶನಿವಾರ ಸಂಜೆಯವರೆಗೂ ಧಾರಾಕಾರವಾಗಿ ಸುರಿದಿದ್ದ ಮಳೆ ಬೆಳಗಾಗುತ್ತಿದ್ದಂತೆ ಮಾಯವಾಗಿದೆ. ನಿರಂತರ ಮಳೆಯಿಂದಾಗಿ ಈ ಬಾರಿ ಕಾಫಿನಾಡಿನಲ್ಲಿ ದೀಪಾವಳಿ ಆಚರಿಸಲು ಸಾಧ್ಯವಿಲ್ಲ ಎಂದು ಬೇಸರಗೊಂಡಿದ್ದ ಜನರು ದಿಢೀರನೆ ಮಳೆ ಬಿಡುವು ನೀಡಿರುವುದರಿಂದ ಸಂತಸದಿಂದ ಹಬ್ಬಾಚರಣೆಗೆ ಸಿದ್ಧತೆ ನಡೆಸಿದ್ದಾರೆ.

ಕಾಫಿನಾಡಿನ ಜನರ ಪಾಲಿಗೆ ಈ ಮಳೆಗಾಲ ಕನಸಿನಲ್ಲೂ ಬೆಚ್ಚಿಬೀಳುವಂತಹ ಘಟನೆಗಳಿಗೆ ಕಾರಣವಾಗಿದೆ. ಕಳೆದ ಆಗಸ್ಟ್ ನಲ್ಲಿ ಜಿಲ್ಲಾದ್ಯಂತ ಸುರಿದ ಮಳೆ ಭಾರೀ ಸಾವು, ನೋವುಗಳಿಗೆ ಕಾರಣವಾಗಿತ್ತು. ಅತಿವೃಷ್ಟಿಯಿಂದ ಭಾರೀ ಪ್ರಮಾಣದಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸಿ ಸಾವಿರಾರು ಜನರು ಸಂತ್ರಸ್ತರಾಗಿದ್ದರು. ಆಗಸ್ಟ್ ತಿಂಗಳಲ್ಲಿ ಆರ್ಭಟಿಸಿದ್ದ ಮಳೆ ಸೆಪ್ಟೆಂಬರ್ ನಲ್ಲಿ ಬಿಡುವು ನೀಡಿದ್ದರಿಂದ ಜನರು ನಿರಾಳರಾಗಿದ್ದರು. ಆದರೆ ಅಕ್ಟೋಬರ್ ತಿಂಗಳು ಆರಂಭವಾಗುತ್ತಿದ್ದಂತೆ ಮತ್ತೆ ಕಾಫಿನಾಡನ್ನು ಕಾಡಿದ ಮಳೆ ಮತ್ತೆ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಅನಾಹುತಗಳಿಗೆ ಕಾರಣವಾಗಿತ್ತು.

ಕಳೆದೊಂದು ವಾರದಿಂದ ಜಿಲ್ಲೆಯ ಏಳೂ ತಾಲೂಕುಗಳಲ್ಲೂ ತೀವ್ರಗೊಂಡಿದ್ದ ಮಳೆ ಶನಿವಾರ ಸಂಜೆಯವರೆಗೂ ಧಾರಾಕಾರವಾಗಿ ಸುರಿದ ಪರಿಣಾಮ ಮಲೆನಾಡಿನಲ್ಲಿ ಈ ಬಾರಿಯ ಮಳೆ ದೀಪಾವಳಿ ಹಬ್ಬದ ಆಚರಣೆಗೆ ತೊಂದರೆ ಮಾಡಲಿದೆ ಎಂಬ ಆತಂಕ ಜನಮಾನಸದಲ್ಲಿ ದಟ್ಟವಾಗಿದ್ದರಿಂದ ಸಹಜವಾಗಿ ಜಿಲ್ಲೆಯಾದ್ಯಂತ ಅಂಗಡಿ ಮುಂಗಟ್ಟುಗಳಲ್ಲಿ ಹಬ್ಬದ ವ್ಯಾಪಾರ ನೀರಸವಾಗಿತ್ತು. ಹಬ್ಬದ ಹಿನ್ನೆಲೆಯಲ್ಲಿ ವಾರಕ್ಕೂ ಮುನ್ನ ತೆರೆದುಕೊಳ್ಳುತ್ತಿದ್ದ ಪಟಾಕಿ ಅಂಗಡಿಗಳು ಕೆಲ ಪಟ್ಟಣಗಳಲ್ಲಿ ಭಾರೀ ಮಳೆಯಿಂದಾಗಿ ಶನಿವಾರವೂ ಕಾರ್ಯಾರಂಭ ಮಾಡಿರಲಿಲ್ಲ. 

ಆದರೆ ಶನಿವಾರ ಸಂಜೆಯವರೆಗೂ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಸುರಿದ ಮಳೆ ರವಿವಾರ ಬೆಳಗಾಗುತ್ತಿದ್ದಂತೆ ಜಿಲ್ಲಾದ್ಯಂತ ಬಿಡುವು ನೀಡಿದೆ. ಚಿಕ್ಕಮಗಳೂರು ನಗರ ಸೇರಿದಂತೆ ಮೂಡಿಗೆರೆ, ಕೊಪ್ಪ, ತರೀಕೆರೆ, ಶೃಂಗೇರಿ, ನರಸಿಂಹರಾಜಪುರ, ಕಡೂರು, ತರೀಕೆರೆ ಪಟ್ಟಗಳಲ್ಲಿ ಮುಂಜಾನೆಯಿಂದಲೇ ಬಿಸಿಲಿನ ವಾತಾವರಣ ಇದ್ದು, ಮಧ್ಯಾಹ್ನದ ಬಳಿಕ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣ ಇತ್ತು. ಮಲೆನಾಡಿನ ಕೆಲವೆಡೆ ಅಲ್ಲಲ್ಲಿ ತುಂತುರ ಮಳೆಯಾಗಿದೆಯಾದರೂ ಧಾರಾಕಾರವಾಗಿ ಮಳೆಯಾದ ಬಗ್ಗೆ ವರದಿಯಾಗಿಲ್ಲ.

ರವಿವಾರ ಮುಂಜಾನೆಯಿಂದಲೇ ಮಳೆ ಬಿಡುವು ನೀಡಿರುವುದರಿಂದ ಜಿಲ್ಲೆಯಾದ್ಯಂತ ದೀಪಾವಳಿ ಹಬ್ಬದ ಸಡಗರ ಕಳೆಗಟ್ಟಿದೆ. ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಹಬ್ಬದ ಖರೀದಿ ಭರಾಟೆ ಬಿರುಸುಗೊಂಡಿದೆ. ಅಂಗಡಿ ಮುಂಗಟ್ಟುಗಳಲ್ಲಿ ಪಟಾಕಿ, ಬಟ್ಟೆ, ಹೂವು, ಹಣ್ಣು ಮತ್ತಿತರ ವಸ್ತುಗಳ ಖರೀದಿಗೆ ಜನರು ಮುಗಿಬೀಳುತ್ತಿದ್ದಾರೆ. ಚಿಕ್ಕಮಗಳೂರು ನಗರದ ಎಂಜಿ ರಸ್ತೆ, ಹನುಮಂತಪ್ಪ ವೃತ್ತ, ಬಸವನಹಳ್ಳಿ ರಸ್ತೆಗಳಲ್ಲಿ ಖರೀದಿ ಭರಾಟೆ ಜೋರಾಗಿದ್ದು, ಈ ರಸ್ತೆಗಳಲ್ಲಿ ರವಿವಾರ ಜನಸಂದಣಿ ಹೆಚ್ಚಿದ್ದು, ಆಗಾಗ್ಗೆ ವಾಹನಗಳ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News