ಮೂಡಿಗೆರೆ: ಕಾಡಾನೆ ದಾಳಿಯಿಂದ ಅರಣ್ಯಾಧಿಕಾರಿಗೆ ಗಂಭೀರ ಗಾಯ

Update: 2019-10-28 18:20 GMT

ಮೂಡಿಗೆರೆ, ಅ.28: ಕಾಡಾನೆಯೊಂದನ್ನು ಮರಳಿ ಕಾಡಿಗಟ್ಟುವ ಅರಣ್ಯಾಧಿಕಾರಿಗಳ ಪ್ರಯತ್ನದ ವೇಳೆ ಕಾಡಾನೆಯಿಂದ ದಾಳಿಗೊಳಗಾದ ಅರಣ್ಯಾಧಿಕಾರಿಯೊಬ್ಬರು ಕೂದಲೆಳೆಯ ಅಂತರದಿಂದ ಪ್ರಾಣಾಪಾಯದಿಂದ ಪಾರಾದ ಘಟನೆ ಸೋಮವಾರ ತಾಲೂಕಿನ ಭೈರಾಪುರ ಗ್ರಾಮದಲ್ಲಿ ವರದಿಯಾಗಿದೆ.

ಚಿಕ್ಕಮಗಳೂರು ಅರಣ್ಯ ಇಲಾಖೆಯ ಉಪ ವಲಯಾರಣ್ಯಾಧಿಕಾರಿ ಚೇತನ್ ಆನೆ ದಾಳಿಗೊಳಗಾದವರಾಗಿದ್ದು, ಪ್ರಾಣಾಪಾಯದಿಂದ ಪಾರಾಗಿರುವ ಅವರನ್ನು ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪಟ್ಟಣದ ಸರಕಾರ ಆಸ್ಪತ್ರಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. 

ತಾಲೂಕಿನ ಭೈರಾಪುರ ಗ್ರಾಮದಲ್ಲಿ ಕಾಡಾನೆಗಳು ಇತ್ತೀಚಿಗೆ ಭಾರೀ ಪ್ರಮಾಣದಲ್ಲಿ ಕಾಫಿ, ಅಡಿಕೆ,ಭತ್ತದ ಗದ್ದೆಗಳಿಗೆ ದಾಳಿ ಮಾಡುತ್ತಿದ್ದು, ಕೆಲ ಅನೆಗಳು ಗ್ರಾಮಗಳ ಕಾಡಂಚಿನಲ್ಲೇ ಬೀಡು ಬಿಟ್ಟಿದ್ದವು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮನವಿ ನೀಡಿ ಆನೆಗಳನ್ನು ಕಾಡಿಗಟ್ಟುವಂತೆ ಆಗ್ರಹಿಸಿದ್ದರು.

ಈ ಹಿನ್ನೆಲೆಯಲ್ಲಿ ಭೈರಾಪುರ ಗ್ರಾಮದ ಬಳಿಯ ಕಾಫಿ ತೋಟವೊಂದರಲ್ಲಿ ಬೀಡು ಬಿಟ್ಟಿದ್ದ ಕಾಡಾನೆಯನ್ನು ಗುರುವಾರ ಅರಣ್ಯಾಧಿಕಾರಿಗಳ ತಂಡ ಕಾಡಿಗಟ್ಟುವ ವೇಳೆ ಕಾಡಾನೆ ಅಧಿಕಾರಿ ಚೇತನ್ ಮೇಲೆ ದಾಳಿ ಮಾಡಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಅಧಿಕಾರಿಯ ಕಾಲಿಗೆ ಗಂಭೀರವಾಗಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News