×
Ad

ಜಿಲ್ಲೆಯಲ್ಲಿ ಶೀಘ್ರ ವೈದ್ಯಕೀಯ ಕಾಲೇಜು ಪ್ರಾರಂಭ: ಸಚಿವ ಸಿ.ಟಿ.ರವಿ

Update: 2019-10-28 23:54 IST

ಚಿಕ್ಕಮಗಳೂರು, ಅ.29: ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸರಕಾರ ಮೂಂಜುರಾತಿ  ನೀಡಿದ್ದು, ಶೀಘ್ರದಲ್ಲಿಯೇ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭವಾಗಲಿದೆ ಎಂದು ಪ್ರವಾಸೋದ್ಯಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ಕಚೇರಿಯ ಅಬ್ದುಲ್ ನಝೀರ್ ಸಾಬ್ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲೆಯ ನೀರಾವರಿ ಯೋಜನೆಗಳ ಕುರಿತ  ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು, ಜಿಲ್ಲಾ ಆಸ್ಪತ್ರೆಯ ಮೇಲ್ದರ್ಜೆಗೇರಿಸುವುದು, ಇಂಜಿನಿಯರ್ ಕಾಲೇಜು, ತರೀಕೆರೆ ಹಾಗೂ ಬಯಲು ಸೀಮೆಯ ಭಾಗದ ಕೆರೆ ತುಂಬಿಸುವುದು ಹಾಗೂ ಜಿಲ್ಲೆಗೆ ಪ್ರತ್ಯೇಕ ಹಾಲು ಉತ್ಪಾದಕರ ಒಕ್ಕೂಟ ಸ್ಥಾಪಿಸುವುದು  ಮೊದಲ ಅಧ್ಯತೆಯಾಗಿ ಕಾರ್ಯಕೈಗೆತ್ತಿಕೊಳ್ಳಬೇಕೆಂದು ಜಿಲ್ಲೆಯ ಶಾಸಕರೊಂದಿಗೆ ಈ ಹಿಂದೆ ನಡೆದಿದ್ದ ಸಭೆಯಲ್ಲಿ ತಿರ್ಮಾನ ಕೈಗೊಳ್ಳಲಾಗಿತ್ತು. ಅದರಂತೆ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಪ್ಪಿಗೆ ನೀಡಿವೆ. 2020-21ನೇ ಸಾಲಿನಲ್ಲಿ ಕಾಲೇಜು ಆರಂಭ ಮಾಡುವ ನಿರೀಕ್ಷೆ ಇದೆ ಎಂದರು. 

ನಗರದಲ್ಲಿರುವ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದಕ್ಕೂ ಸರಕಾರ ಅನುಮೋದನೆ ನೀಡಿದೆ ಎಂದ ಅವರು, ನಗರದಲ್ಲಿ ಪ್ರಸಕ್ತ 400 ಹಾಸಿಗೆಯುಳ್ಳ ಜಿಲ್ಲಾ ಆಸ್ಪತ್ರೆಯನ್ನು ಹೊಂದಿದೆ. ಅದನ್ನು ಸಾವಿರ ಹಾಸಿಗೆಯ ಹೆಚ್ಚಿಸುವ ಮೂಲಕ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು 170 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಅಲ್ಲದೇ ಮುಂದೆ ಜಿಲ್ಲೆಯ ರೋಗಿಗಳು ಬೇರೊಂದು ಜಿಲ್ಲೆಗೆ ಹೋಗಿ ಚಿಕಿತ್ಸೆ ಪಡೆಯದೇ ಕ್ಯಾನ್ಸರ್ ರೋಗವನ್ನು ಹೊರತುಪಡಿಸಿ ಎಲ್ಲಾ ರೋಗಕ್ಕೂ ಜಿಲ್ಲೆಯಲ್ಲೇ ಚಿಕಿತ್ಸೆ ಪಡೆಯುವಂತಹ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದ ಅವರು, ಮುಂದಿನ ದಿನಗಳಲ್ಲಿ ಕ್ಯಾನ್ಸರ್ ರೋಗಕ್ಕೂ ಚಿಕಿತ್ಸೆ ನೀಡವು ಸೌಲಭ್ಯವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲೆಯ ಬಯಲು ಸೀಮೆಯ ಭಾಗಗಳಾದ ಕಡೂರು ಕೆರೆಗಳಿಗೆ 1.45 ಟಿ.ಎಂ.ಸಿ ನೀರು ತುಂಬಿಸುವ ಯೊಜನೆಯನ್ನು ಡಿ.ಪಿ.ಆರ್ ತಯಾರಿಸಿ ಮಂತ್ರಿ ಮಂಡಲಕ್ಕೆ ಕಳುಹಿಸಲಾಗಿದೆ. ಅನುಮೋದನೆಗೊಂಡ ನಂತರ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದು ಅವರು, ಇದರಿಂದಾಗಿ ಬಯಲು ಪ್ರದೇಶಗಳಲ್ಲಿ ಜನರ ನೀರಿನ ಸಮಸ್ಯೆ ನೀಗಲಿದೆ. ಸರಕಾರದ ಆದೇಶದಂತೆ 168 ಕೆರೆಗಳ ತುಂಬಿಸುವ ಯೋಜನೆಗೆ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆಗಾಗಿ ಸರಕಾರಕ್ಕೆ ಕಳುಹಿಸಲಾಗಿದ್ದು, ಈ ಯೋಜನೆಯಿಂದ 168 ಕೆರೆಗಳಿಗೆ ನೀರು ತುಂಬಿಸಲು ಕ್ರಮವಹಿಸಲಾಗುವುದು. ಈ ಕುರಿತು ವಿಶ್ವೇಶ್ವರಯ್ಯ ಜಲ ನಿಗಮದ ಕಾರ್ಯಪಾಲಕ ಅಭಿಯಂತರರು ಸಭೆಗೆ ವಿವಿರವಾದ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ತರೀಕೆರೆ, ಕಡೂರು, ಚಿಕ್ಕಮಗಳೂರು ತಾಲೂಕಿನಿಂದ ಆಗಮಿಸಿದ್ದ ರೈತ ಮುಂಖಡರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸಭೆಯಲ್ಲಿ ತರೀಕೆರೆ ಶಾಸಕ ಡಿ.ಎಸ್ ಸುರೇಶ್ ಕಡೂರು ಕ್ಷೇತ್ರದ ಶಾಸಕ ಬೆಳ್ಳಿ ಪ್ರಕಾಶ್ ಜಿ.ಪಂ ಅಧ್ಯಕ್ಷ ಸುಜಾತ ಕೃಷ್ಣಪ್ಪ ಜಿ.ಪಂ ಉಪಾಧ್ಯಕ್ಷ ವಿಜಯ ಕುಮಾರ್ ಗುಣಸಾಗರ್, ಜಿಲ್ಲಾಧಿಕಾರಿ ಡಾ.ಬಗಾಡಿ ಗೌತಮ್, ಅಪರ ಜಿಲ್ಲಾಧಿಕಾರಿ ಡಾ. ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ರೈತ ಮುಂಖಡರು ಸಭೆಯಲ್ಲಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News