ಆನ್‍ಲೈನ್ ಮೊಬೈಲ್ ಫೋನ್ ಆರ್ಡರ್ ಮಾಡಿದ್ದ ಬಿಜೆಪಿ ಸಂಸದನಿಗೆ ದಕ್ಕಿದ್ದು ಕಲ್ಲು !

Update: 2019-10-29 09:04 GMT

ಕೊಲ್ಕತ್ತಾ : ಪಶ್ಚಿಮ ಬಂಗಾಳದ ಉತ್ತರ ಮಾಲ್ಡಾ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಸಂಸದ ಖಗೇನ್ ಮುರ್ಮು ಆನ್‍ಲೈನ್ ಮೂಲಕ ಮೊಬೈಲ್ ಫೋನ್ ಖರೀದಿಸಿ ಬೇಸ್ತು ಬಿದ್ದಿದ್ದಾರೆ.

ಜನಪ್ರಿಯ ಇ-ಕಾಮರ್ಸ್ ವೆಬ್ ತಾಣದಲ್ಲಿ ದೀಪಾವಳಿ ಆಪರ್ ನಿಮಿತ್ತ 11,999 ರೂ. ಬೆಲೆಯ ಮೊಬೈಲ್ ಫೋನ್ ಆರ್ಡರ್ ಮಾಡಿದ್ದರು. ಇದನ್ನು ತಮ್ಮ ಸಂಬಂಧಿಗೆ ದೀಪಾವಳಿ ಉಡುಗೊರೆಯಾಗಿ ನೀಡಬಯಸಿದ್ದ ಸಂಸದ ಸಿಒಡಿ ಆಯ್ಕೆ ಮಾಡಿದ್ದರು.

ರವಿವಾರ ಸಂಸ್ಥೆಯ ಡೆಲಿವರಿ ಬಾಯ್ ಮೊಬೈಲ್ ಫೋನ್ ಪಾರ್ಸೆಲ್ ನೀಡಿದಾಗ ಅದನ್ನು ತೆರೆದು ನೋಡದೆಯೇ ಮುರ್ಮು ಹಣ ಪಾವತಿಸಿದ್ದರು. ಸೋಮವಾರ ಬೆಳಗ್ಗೆ ಅದನ್ನು ತೆರೆದು ನೋಡಿದಾಗ ಅದರಲ್ಲಿ ಬೇರೆ ಫೋನ್ ಕಂಪೆನಿಯ ಬಾಕ್ಸ್ ಇತ್ತಲ್ಲದೆ ಅದರೊಳಗೆ ಮೊಬೈಲ್ ಫೋನ್ ಬದಲು ಎರಡು ಕಲ್ಲುಗಳಿದ್ದವು.

ಈ ಕುರಿತಂತೆ ಸಂಸದ ಪೊಲೀಸ್ ದೂರು ನೀಡಿದ್ದಾರೆ. ಅವರು ಅನ್ ಲೈನ್ ಮೂಲಕ ಇದೇ ಮೊದಲ ಬಾರಿ ಖರೀದಿಸಿದ್ದು, ತಮಗಾದ ವಂಚನೆ ಕುರಿತಂತೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವರ ಗಮನವನ್ನೂ ಸೆಳೆಯುವುದಾಗಿ ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಪೊಲೀಸರು ಫೋನ್ ಡೆಲಿವರಿ ಮಾಡಿದ ವ್ಯಕ್ತಿಯ ವಿಚಾರಣೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News