ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಬಿಡುಗಡೆಗೆ ಹೋರಾಟ ಸಮಿತಿ ಆಗ್ರಹ

Update: 2019-10-29 11:46 GMT

ಮಡಿಕೇರಿ, ಅ.29: ಸಾಮಾಜಿಕ ಹೋರಾಟಗಾರ ಹಾಗೂ ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಿ ಬಂಧಿಸಲಾಗಿದೆ ಎಂದು ಆರೋಪಿಸಿರುವ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ದುರ್ಬಲರ ಪರ ಹೋರಾಟ ನಡೆಸುವವರನ್ನು ಹತ್ತಿಕ್ಕುವ ಕ್ರಮವನ್ನು ಖಂಡಿಸುವುದಾಗಿ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‍ಡಿಪಿಐ ರಾಜ್ಯ ಕಾರ್ಯದರ್ಶಿ ಹಾಗೂ ಹೋರಾಟ ಸಮಿತಿಯ ಪ್ರಮುಖ ಅಮಿನ್ ಮೊಹ್ಸಿನ್, ಬಂಧನಕ್ಕೊಳಗಾಗಿರುವ ನರಸಿಂಹಮೂರ್ತಿ ಅವರನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದರು. ಇತ್ತೀಚಿನ ದಿನಗಳಲ್ಲಿ ದಲಿತರು ಹಾಗೂ ದುರ್ಬಲ ವರ್ಗದವರ ಪರ ಹೋರಾಟ ನಡೆಸುವವರನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿದೆ ಎಂದು ಆರೋಪಿಸಿದರು. ಸಮಾಜದಲ್ಲಿ ಕಂಡುಬರುವ ಲೋಪಗಳ ವಿರುದ್ಧ ಧ್ವನಿ ಎತ್ತುವ ಚಿಂತಕರು, ಪತ್ರಕರ್ತರು ಹಾಗೂ ಹೋರಾಟಗಾರರಿಗೆ ಸರ್ಕಾರ ಸೂಕ್ತ ರಕ್ಷಣೆ ಮತ್ತು ಪ್ರೋತ್ಸಾಹವನ್ನು ನೀಡಬೇಕು ಎಂದರು.

ಸ್ವರಾಜ್ ಇಂಡಿಯಾ ಪಕ್ಷದ ಮುಖಂಡ, ಗೌರಿ ಮೀಡಿಯಾ ಟ್ರಸ್ಟ್ ನ ಕಾರ್ಯದರ್ಶಿ, ಪ್ರಗತಿಪರ ಹೋರಾಟಗಾರ ಹಾಗೂ ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರ ಮೇಲೆ ಹಾಕಿರುವ ಸುಳ್ಳು ಕೇಸ್‍ಗಳನ್ನು ಬೇಷರತ್ ಹಿಂಪಡೆಯಬೇಕು ಮತ್ತು ತಕ್ಷಣ ಅವರನ್ನು ಬಿಡುಗಡೆಗೊಳಿಸಬೇಕು, ದಲಿತರು, ಆದಿವಾಸಿಗಳು, ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಗಳನ್ನು ನಿಯಂತ್ರಿಸಬೇಕು, ದಲಿತರು ಹಾಗೂ ದುರ್ಬಲರ ಪರ ಹೋರಾಟ ನಡೆಸುವವರ ವಿರುದ್ಧ ಆತಂಕ ಮೂಡಿಸುವ ಪ್ರಕರಣಗಳನ್ನು ದಾಖಲಿಸುವುದನ್ನು ಕೈ ಬಿಡಬೇಕು ಎಂದು ಅಮಿನ್ ಮೊಹ್ಸಿನ್ ಒತ್ತಾಯಿಸಿದರು.

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡು ಸರ್ವಾಧಿಕಾರಿ ಧೋರಣೆ ತೋರುವವರ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದರು.

ಸಮಿತಿಯ ಪ್ರಮುಖ ಹೇಮಂತ್ ಸುಖದೇವ್ ಮಾತನಾಡಿ, ರಾಯಚೂರಿನಲ್ಲಿ ಸುಮಾರು 25 ವರ್ಷಗಳ ಹಿಂದೆ ನಕ್ಸಲರು ನಡೆಸಿದರೆನ್ನಲಾದ ಕೃತ್ಯಗಳಿಗೆ ಸಂಬಂಧ ಕಲ್ಪಿಸಿ ನರಸಿಂಹಮೂರ್ತಿ ಅವರನ್ನು ಬಂಧಿಸಲಾಗಿದೆ. ಇಪ್ಪತ್ತು ವರ್ಷಗಳಿಂದ ತಲೆಮರಿಸಿಕೊಂಡಿದ್ದ ನರಸಿಂಹಮೂರ್ತಿಯನ್ನು ಬಂದಿಸಿರುವುದಾಗಿ ಪೊಲೀಸರು ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಪತ್ರಕರ್ತರು ಹಾಗೂ ಹೋರಾಟಗಾರರ ವಾಕ್ ಸ್ವಾತಂತ್ರ್ಯವನ್ನು ಸರ್ಕಾರ ಕಸಿದುಕೊಳ್ಳುತ್ತಿದೆ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸದಸ್ಯರು ಹಾಗೂ ಬಹುಜನ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಕೆ.ಮೊಣ್ಣಪ್ಪ ಮತ್ತು ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಸಣ್ಣಪ್ಪ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News