ಕೇರಳದಲ್ಲಿ ಎನ್‍ಕೌಂಟರ್ ನಲ್ಲಿ ಮೃತಪಟ್ಟ ಶಂಕಿತ ನಕ್ಸಲರು ತಮಿಳುನಾಡು ಮೂಲದವರು: ಎಸ್ಪಿ ಹರೀಶ್ ಪಾಂಡೆ

Update: 2019-10-29 14:37 GMT

ಚಿಕ್ಕಮಗಳೂರು, ಅ.29: ಕೇರಳದಲ್ಲಿ ಎಎನ್‍ಎಫ್‍ನೊಂದಿಗಿನ ಗುಂಡಿನ ಚಕಮಕಿಯಲ್ಲಿ ನಾಲ್ವರು ಶಂಕಿತ ನಕ್ಸಲರು ಮೃತಪಟ್ಟಿದ್ದು, ಮೃತರೆಲ್ಲರೂ ತಮಿಳುನಾಡು ಮೂಲದವರೆಂದು ಕೇರಳ ಪೊಲೀಸರು ಸ್ಪಷ್ಟಪಡಿಸಿದ್ದಾರೆ ಎಂದು ಜಿಲ್ಲಾ ಎಸ್ಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.

ಸೋಮವಾರ ಬೆಳಗ್ಗೆ ನಡೆದ ಎನ್‍ಕೌಂಟರ್ ನಲ್ಲಿ ನಾಲ್ವರು ಮೃತಪಟ್ಟಿದ್ದು, ಈ ಪೈಕಿ ಇಬ್ಬರು ಚಿಕ್ಕಮಗಳೂರು ಮೂಲದವರು ಎಂದು ಹೇಳಲಾಗಿತ್ತು. ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದ ಸುರೇಶ್ ಹಾಗೂ ಶೃಂಗೇರಿ ತಾಲೂಕು ಬೆಳಗೋಡು ಕೂಡಿಗೆ ಗ್ರಾಮದ ಶ್ರೀಮತಿ ಎಂದು ತಿಳಿಸಲಾಗಿತ್ತು. ಆದರೆ ಕೇರಳದ ಪೊಲೀಸರು, ಮೃತರಲ್ಲಿ ಕರ್ನಾಟಕದವರು ಯಾರೂ ಇಲ್ಲ, ಮೃತರೆಲ್ಲರೂ ತಮಿಳುನಾಡು ಮೂಲದವರೆಂದು ಅಧಿಕೃತ ಮಾಹಿತಿ ನೀಡಿದ್ದಾರೆಂದು ಎಸ್ಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.

ಕೇರಳದಲ್ಲಿ ಎಎನ್‍ಎಫ್ ನಡೆಸಿದ ಎನ್‍ಕೌಂಟರ್ ನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದ ಸುರೇಶ್ ಹಾಗೂ ಶೃಂಗೇರಿ ತಾಲೂಕಿನ ಶ್ರೀಮತಿ ಮೃತಪಟ್ಟಿದ್ದಾರೆಂದು ಮಾಧ್ಯಮಗಳಲ್ಲಿ ಬಿತ್ತರವಾದ ಸುದ್ದಿಗಳಿಂದಾಗಿ ಅಂಗಡಿ ಗ್ರಾಮದಲ್ಲಿರುವ ಸುರೇಶ್ ಮನೆಯ ಬಳಿ ಹಾಗೂ ಶೃಂಗೇರಿಯ ಶ್ರೀಮತಿ ಮನೆಯ ಬಳಿ ಸಾಕಷ್ಟು ಜನರು ಸೇರಿದ್ದರು. ಈ ಸುದ್ದಿಯಿಂದಾಗಿ ಸುರೇಶ್ ಹಾಗೂ ಶ್ರೀಮತಿ ಹೆತ್ತವರು, ಸಂಬಂಧಿಕರು ಕಣ್ಣೀರಿಡುವಂತಾಗಿತ್ತು. ಆದರೆ ಸಂಜೆ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೀಡಿದ ಸ್ಪಷ್ಟನೆಯಿಂದಾಗಿ ಸುರೇಶ್, ಶ್ರೀಮತಿ ಕಟುಂಬದವರು ನಿರಾಳರಾಗುವಂತಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News