ತುಮಕೂರಿನಲ್ಲಿ ಭೀಕರ ಬಸ್ ಅಪಘಾತ: 6 ಮಂದಿ ಮೃತ್ಯು; 19 ಮಂದಿಗೆ ಗಾಯ

Update: 2019-10-30 14:38 GMT

ತುಮಕೂರು,ಅ.30: ಜಿಲ್ಲೆಯ ಕೊರಟಗೆರೆ ತಾಲೂಕಿನ ಜಟ್ಟಿ ಅಗ್ರಹಾರದ ಬಳಿ ಸಂಭವಿಸಿದ ಬಸ್ ಪಲ್ಟಿಯಾಗಿ 6 ಮಂದಿ ಸಾವನ್ನಪ್ಪಿ, 19 ಮಂದಿಗೆ ಗಾಯಗಳಾಗಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

ಮಧುಗಿರಿ ಕಡೆಯಿಂದ ತುಮಕೂರಿಗೆ ಬರುತ್ತಿದ್ದ ರಾಜಲಕ್ಷ್ಮೀ ಬಸ್ ಕೊರಟಗೆರೆ ತಾಲೂಕಿನ ಜಟ್ಟಿ ಅಗ್ರಹಾರ ಬಳಿ ಪಲ್ಟಿಯಾಗಿದ್ದು, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 6 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಜಿಲ್ಲಾಧಿಕಾರಿ ಡಾ.ರಾಕೇಶ್‍ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಭೇಟಿ ನೀಡಿದ್ದರು.

ದುರಂತದಲ್ಲಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಸಚಿವ ಜೆ.ಸಿ. ಮಾಧುಸ್ವಾಮಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎದುರಿಗೆ ಬಂದ ಆಟೋರಿಕ್ಷಾವನ್ನು ತಪ್ಪಿಸಲು ಹೋಗಿ ಖಾಸಗಿ ಬಸ್ ತಲೆಕೆಳಗಾಗಿ ಬಿದ್ದದ್ದರಿಂದ ಈ ಅಪಘಾತ ಸಂಭವಿಸಿದೆ ಎಂದರು. 

ಬಸ್ ದುರಂತದಲ್ಲಿ 6 ಜನ ಮೃತಪಟ್ಟಿದ್ದು, 19  ಜನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಪೈಕಿ 6-7 ಜನರಿಗೆ ಮೂಳೆ ಮುರಿದಿದೆ. ಈ ಎಲ್ಲ ಗಾಯಾಳುಗಳಿಗೆ ಉಚಿತವಾಗಿ ಸೇವೆ ಒದಗಿಸಿ ಗುಣವಾಗುವವರೆಗೂ ವೈದ್ಯಕೀಯ ಆರೈಕೆ ಮಾಡಲಾಗುತ್ತದೆ. ಎಲ್ಲ ವ್ಯವಸ್ಥೆಯನ್ನು ಸರ್ಕಾರದ ವತಿಯಿಂದ ಮಾಡುತ್ತೇವೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸಾ ಸೌಲಭ್ಯ ಒದಗಿಸುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ ಅವರಿಗೆ ಸೂಚಿಸಿದರು.  

ಖಾಸಗಿ ಬಸ್‍ಗಳು ಆ ಮಾರ್ಗವಾಗಿ ತುಂಬಾ ಓಡಾಡುತ್ತವೆ. ಈ ಬಸ್ಸುಗಳ ಸಂಚಾರ ಸಮಯದ ಅಂತರ ಕೂಡ ಕಡಿಮೆ ಇರುವುದರಿಂದ ಬಸ್ ನಿಲ್ದಾಣದಲ್ಲಿ ಹೆಚ್ಚು ಹೊತ್ತು ಬಸ್‍ಗಳು ನಿಲ್ಲಲು ಏಜೆಂಟ್‍ಗಳು ಬಿಡದೇ ನಾ ಮುಂದು ತಾ ಮುಂದು ಎಂದು ಹೊರಡುತ್ತವೆ. ಈ ರಸ್ತೆಯಲ್ಲಿ ಹಂಪ್‍ಗಳನ್ನು ಹಾಕಬಾರದೆಂಬ ನಿಯಮವಿರುವುದರಿಂದ ವೇಗವನ್ನು ತಪ್ಪಿಸಲು ಆಗುತ್ತಿಲ್ಲ. ಕೆಲಸಕ್ಕೆ ಹೋಗುವವರಿಗೆ ಬೆಳಗ್ಗೆ 8.30 ರಿಂದ 10 ಗಂಟೆಯವರೆಗೆ ಮಹತ್ವದ ಸಮಯ. ಈ ಸಮಯದಲ್ಲಿ ವೇಗದಿಂದ ಬಸ್ಸುಗಳು ಸಂಚಾರ ಮಾಡುತ್ತವೆ. ಇವೆಲ್ಲವೂ ಸಹ ಅಪಘಾತವಾಗಲು ಮುಖ್ಯ ಕಾರಣವಾಗಿವೆ. ಇದನ್ನು ತಡೆಗಟ್ಟಲು  ಈ ಸಮಯದಲ್ಲಿ ಸರ್ಕಾರಿ ಬಸ್‍ಗಳನ್ನು ಬಿಡುವ ಕುರಿತು ತೀರ್ಮಾನ ತೆಗೆದುಕೊಳ್ಳಲು ಮುಂದಾಗಿದ್ದೇವೆ. ಬಹುಶಃ ನವೆಂಬರ್ 1ರಂದು ನಡೆಯುವ ಜಿಲ್ಲಾಧಿಕಾರಿಗಳು ಹಾಗೂ ಆರ್‍ಟಿಒ ಅಧಿಕಾರಿಗಳ ಸಭೆಯಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News