×
Ad

ನನ್ನ ಬಾಯಿ ಮುಚ್ಚಿಸಲು ನಿಮಗೆ ಸಾಧ್ಯವಿಲ್ಲ..: ಬಿಜೆಪಿ, ಬಿಎಸ್‌ವೈ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

Update: 2019-10-30 17:59 IST

ಬೆಂಗಳೂರು, ಅ. 30: ‘ಸತ್ತು ಹೋಗಿರುವ ಸರಕಾರ ಮಾತ್ರ ಹೀಗಿರಲು ಸಾಧ್ಯ. ಜೀವಂತವಿದ್ದರೆ ಜನರ ಕಷ್ಟಗಳಿಗೆ ಸ್ಪಂದಿಸಿ ನಿಮ್ಮ ಜೀವಂತಿಕೆ ತೋರಿಸಿ. ಜನರ ಗಮನ ಬೇರೆ ಕಡೆ ಸೆಳೆಯುವ ಕುತಂತ್ರ ಬೇಡ. ಮೊದಲು ನೆರೆ ಪರಿಹಾರದ ಲೆಕ್ಕಕೊಡಿ, ಆಮೇಲೆ ಟಿಪ್ಪು, ಸಾವರ್ಕರ್ ಬಗ್ಗೆ ಮಾತನಾಡೋಣ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಲೆಕ್ಕ ಕೊಡಿ: ‘ನೀವೇ ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಕುಸಿದುಬಿದ್ದ ಮನೆಗಳ ಸಂಖ್ಯೆ 2,47,628 ಎಂದು ಹೇಳಿದ್ದೀರಿ. ಅಷ್ಟು ಮನೆ ಮಾಲಕರಿಗೆ ತಲಾ 10 ಸಾವಿರ ರೂ.ಪರಿಹಾರ ಕೊಟ್ಟಿದ್ದೀರಾ? ಅಷ್ಟು ಮನೆಗಳನ್ನು ಕಟ್ಟಿಸಿಕೊಡುತ್ತಿದ್ದೀರಾ? ಲೆಕ್ಕಕೊಡಿ’ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ನಾನು ಯಡಿಯೂರಪ್ಪ ಅಲ್ಲ: ‘ನೆರೆ ಪೀಡಿತ ಪ್ರದೇಶಗಳ ಜನರ ಸಂಕಷ್ಟಗಳನ್ನು ಕಣ್ಣಾರೆ ಕಂಡು ಮಾತನಾಡಿದರೆ ಮುಖ್ಯಮಂತ್ರಿ ಯಡಿಯೂರಪ್ಪನವರೇ, ನಿಮಗೆ ಸುಳ್ಳಿನಂತೆ ಕಾಣಿಸುತ್ತಿದೆಯೇ? ಜಿಲ್ಲಾಧಿಕಾರಿಗಳು ಕೊಟ್ಟ ಹೇಳಿಕೆ ಓದಲು ನಾನು ಯಡಿಯೂರಪ್ಪ ಅಲ್ಲ, ನಾನು ಸಿದ್ದರಾಮಯ್ಯ. ಪ್ರತ್ಯಕ್ಷವಾಗಿ ಪರಿಶೀಲನೆ ಮಾಡಿ ಮಾತನಾಡ್ತೇನೆ’ ಎಂದು ಸರಣಿ ಟ್ವಿಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪ್ರವಾಹ ಬಂದು 3 ತಿಂಗಳಾದರೂ ಪರಿಹಾರದ ಹಣ ಜನರನ್ನು ತಲುಪಿಲ್ಲ. ಪರಿಹಾರ ಕಾರ್ಯ ವಿಳಂಬವಾಗುತ್ತೆ ಎಂಬ ನೆಪವೊಡ್ಡಿ ಅಧಿವೇಶನವನ್ನು ಮೊಟಕು ಗೊಳಿಸಿದ ಸರಕಾರ, ಈಗ ಉಪಚುನಾವಣೆಯ ತಯಾರಿಯಲ್ಲಿ ಮುಳುಗಿದೆ. ಸಂತ್ರಸ್ತರು ಬೀದಿಯಲ್ಲಿದ್ದರೂ ಸರಕಾರ ಅವರೆಡೆಗೆ ಕಣ್ಣೆತ್ತಿ ನೋಡುತ್ತಿಲ್ಲ’ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

‘ಹುಬ್ಬಳ್ಳಿಗೆ ಭೇಟಿ ನೀಡಿ ಪಕ್ಷದ ಟಿಕೆಟ್ ಹಂಚಿಕೆ ಮಾಡುವ ಸಿಎಂ ಯಡಿಯೂರಪ್ಪನವರಿಗೆ ಪ್ರವಾಹ ಸಂತ್ರಸ್ತರ ಕಷ್ಟ ಕೇಳಲು ಸಮಯವಿಲ್ಲ. ಮಹಾರಾಷ್ಟ್ರ ಚುನಾವಣೆಯಲ್ಲಿ ಪ್ರವಾಹ ತಲೆದೋರಿದ್ದ ಕಡೆ ಬಿಜೆಪಿ ಸೋತ ಹೊರತಾಗಿಯೂ ಕರ್ನಾಟಕ ಬಿಜೆಪಿ ಪಾಠ ಕಲಿತಂತೆ ಕಾಣುತ್ತಿಲ್ಲ. ಈಗಲೂ ನೊಂದವರ ಬಗ್ಗೆ ತಾತ್ಸಾರ ಧೋರಣೆಯನ್ನು ಅನುಸರಿಸುತ್ತಲೇ ಇದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ರಾಜ್ಯದಲ್ಲಿ ಪ್ರವಾಹದಿಂದ ಸಂಕಷ್ಟಕ್ಕೀಡಾದ ಪ್ರತಿ ಜಿಲ್ಲೆಗೂ ಈ ಹಿಂದೆಯೇ ಭೇಟಿ ನೀಡಿ ಸಂತ್ರಸ್ತರ ಕಷ್ಟ ಆಲಿಸಿದ್ದೇನೆ. ನಾನು ಬೆಳಗಾವಿಗೆ ಎರಡು ಬಾರಿ ಭೇಟಿ ನೀಡಿ, ಪರಿಹಾರ ಕಾರ್ಯಗಳ ವೀಕ್ಷಣೆ ಮಾಡಿದ್ದೇನೆ. ನನಗೆ ಚುನಾವಣೆ ಬೇಕಾಗಿದೆ ಎನ್ನುವವರು ಎಷ್ಟು ಕಡೆ ಹೋಗಿ ಸಂತ್ರಸ್ತರ ಕಷ್ಟ ಆಲಿಸಿದ್ದಾರೆಂದು ನೋಡಿಕೊಳ್ಳಲಿ’ ಎಂದು ತಿರುಗೇಟು ನೀಡಿದ್ದಾರೆ.

‘ಸಿಎಂ ಬಿಎಸ್‌ವೈ ಅವರೇ, ಪತ್ರಿಕೆಗಳ ವರದಿಗಳನ್ನು ಕಣ್ಣುಬಿಟ್ಟು ಓದಿ. ವಿಧಾನಸೌಧದಲ್ಲಿ ಕೂತು ಸಭೆ ನಡೆಸುತ್ತಿರುವ ನೀವು ಮತ್ತು ನಿಮ್ಮ ಸಹದ್ಯೋಗಿಗಳು ಒಮ್ಮೆ ನೆರೆಬಾಧಿತ ಪ್ರದೇಶಗಳ ಕಡೆ ಹೆಜ್ಜೆ ಹಾಕಿ. ನಿಮ್ಮ ಉಪಚುನಾವಣಾ ತಯಾರಿ ಕಸರತ್ತು ನಿಲ್ಲಿಸಿ ಜನರ ಕಷ್ಟದ ಕಡೆ ಗಮನಕೊಡಿ’ ಎಂದು ಸಿದ್ದರಾಮಯ್ಯ ಸಲಹೆ ಮಾಡಿದ್ದಾರೆ.

ನನ್ನ ಬಾಯಿ ಕಟ್ಟಲಾಗದು: ‘ನನ್ನ ಮಾತು ನಿಮಗೆ ಸಹಿಸಲಾಗುವುದಿಲ್ಲ, ಇದಕ್ಕಾಗಿಯೇ ಕಾಟಾಚಾರಕ್ಕೆ ವಿಧಾನ ಮಂಡಲ ಅಧಿವೇಶನ ನಡೆಸಿ ಮುಗಿಸಿಬಿಟ್ಟಿರಿ. ಈಗ ಯಾವುದೋ ವಿಡಿಯೋ, ಇನ್ನಾವುದೋ ಸುಳ್ಳು ಆರೋಪಗಳನ್ನು ಮಾಡಿ ಬಾಯಿ ಮುಚ್ಚಿಸಲು ನೋಡುತ್ತಿದ್ದೀರಿ. ಬಿಜೆಪಿ ನಾಯಕರೇ, ಈ ರೀತಿ ನನ್ನ ಬಾಯಿ ಕಟ್ಟಲಾಗದು’ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

‘ಕುಮಾರಸ್ವಾಮಿಯವರಿಗೆ 14 ತಿಂಗಳು ನಾನು ಆಡಳಿತ ನಡೆಸಲು ಬಿಡಲಾಗದಷ್ಟು ತೊಂದರೆ ಕೊಟ್ಟಿದ್ದರೆ ಮೊದಲ ದಿನವೆ ಅವರು ರಾಜೀನಾಮೆ ಕೊಟ್ಟುಬಿಡಬಹುದಿತ್ತು. 14 ತಿಂಗಳು ಆಡಳಿತ ನಡೆಸಿ ಈಗ ರಾಜಕೀಯ ದುರುದ್ದೇಶಕ್ಕೆ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ. ಸರಕಾರ ಬೀಳಿಸುವುದರಲ್ಲಿ ಯಾರು ನಿಪುಣರು ಎಂದು ಅವರವರ ಇತಿಹಾಸವೇ ಹೇಳುತ್ತದೆ’

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News