ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಮಳೆ: 'ಯೆಲ್ಲೋ ಅಲರ್ಟ್' ಘೋಷಣೆ

Update: 2019-10-30 13:49 GMT

ಶಿವಮೊಗ್ಗ, ಅ. ಕಳೆದ ಮೂರ್ನಾಲ್ಕು ದಿನಗಳಿಂದ ಮಲೆನಾಡಿನಲ್ಲಿ ಸಂಪೂರ್ಣ ಬಿಡುವು ನೀಡಿದ್ದ ವರ್ಷಧಾರೆ, ಬುಧವಾರ ಮತ್ತೆ ಕಾಣಿಸಿಕೊಂಡಿದೆ. ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ, ಕೆಲ ನಿಮಿಷಗಳ ಕಾಲ ಧಾರಾಕಾರ ಮಳೆಯಾಯಿತು. ಇದು ರೈತ ಸಮೂಹವನ್ನು ಮತ್ತೆ ಆತಂಕಕ್ಕೀಡು ಮಾಡಿದೆ.  

ಬುಧವಾರ ಬೆಳಗ್ಗೆಯಿಂದಲೇ ಜಿಲ್ಲೆಯ ಹಲವೆಡೆ ಮೋಡ ಕವಿದ ವಾತಾವರಣ ಕಂಡುಬಂತು. ಆಗಾಗ್ಗೆ ತುಂತುರು ಮಳೆಯಾಗುತ್ತಿತ್ತು. ಕೆಲ ಸಮಯ ಬಿಸಿಲು ಕಾಣಿಸಿಕೊಂಡಿತಾದರೂ, ಸಂಜೆ ವೇಳೆಗೆ ಗುಡುಗು ಸಹಿತ ಮಳೆಯಾಯಿತು. 

ಇನ್ನೊಂದೆಡೆ ಹವಾಮಾನ ಇಲಾಖೆಯು ನವೆಂಬರ್ 1 ರವರೆಗೆ ಶಿವಮೊಗ್ಗ ಸೇರಿದಂತೆ 9 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ, ಕರಾವಳಿ ಭಾಗದಲ್ಲಿ 70 ರಿಂದ 80 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಮುನ್ಸೂಚನೆ ನೀಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಜಿಲ್ಲೆಗಳಲ್ಲಿ 'ಯೆಲ್ಲೋ ಅಲರ್ಟ್' ಘೋಷಿಸಿದೆ.

ಸಂಕಷ್ಟ: ದೀಪಾವಳಿ ಹಬ್ಬದ ಮುನ್ನಾ ದಿನದಿಂದ ಮಳೆ ಕಡಿಮೆಯಾಗಿ, ಬಿಸಿಲು ಬೀಳಲಾರಂಭಿಸಿದ್ದು ನಾಗರಿಕರಲ್ಲಿ ನೆಮ್ಮದಿಯ ಭಾವ ಉಂಟು ಮಾಡಿತ್ತು. ರೈತರು ಮೆಕ್ಕೆಜೋಳ ಮತ್ತಿತರ ಬೆಳೆಗಳ ಕಟಾವಿಗೆ ಸಕಲ ತಯಾರಿ ನಡೆಸಲಾರಂಭಿಸಿದ್ದರು. ಆದರೆ ದೀಪಾವಳಿ ಹಬ್ಬ ಕೊನೆಗೊಂಡ ಬೆನ್ನಲ್ಲೆ, ಮತ್ತೆ ಮಳೆಯಾಗಲಾರಂಭಿಸಿರುವುದು ರೈತ ಸಮೂಹದಲ್ಲಿ ಆತಂಕದ ಕರಿಛಾಯೆ ಆವರಿಸುವಂತೆ ಮಾಡಿದೆ. ಕಷ್ಟಪಟ್ಟು ಬೆಳೆದ ಹಾಗೂ ಅಳಿದುಳಿದ ಬೆಳೆಯೂ ಎಲ್ಲಿ ಕೈತಪ್ಪಿ ಹೋಗುವುದೋ ಎಂಬ ಚಿಂತೆಯಲ್ಲಿ ಮುಳುಗುವಂತೆ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News