ಡಿವೈಎಸ್‍ಪಿ ಗಣಪತಿ ಸಾವಿನ ಪ್ರಕರಣ: ಸಿಬಿಐ ತನಿಖಾ ವರದಿ ನ್ಯಾಯಾಲಯಕ್ಕೆ ಸಲ್ಲಿಕೆ

Update: 2019-10-30 14:28 GMT

ಮಡಿಕೇರಿ, ಅ.30: 2017ರಲ್ಲಿ ಮಡಿಕೇರಿಯಲ್ಲಿ ನಡೆದ ಡಿವೈಎಸ್‍ಪಿ ಮಾದಪಂಡ ಗಣಪತಿ ಅವರ ಸಂಶಯಾಸ್ಪದ ಸಾವಿನ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಚೆನೈನ ಸಿಬಿಐ ಪೂರ್ಣಗೊಳಿಸಿದೆ ಎಂದು ತಿಳಿದು ಬಂದಿದೆ. ಇಂದು ಸಿಬಿಐ ಅಧಿಕಾರಿಗಳ ತಂಡ ಸಮಗ್ರ ತನಿಖಾ ವರದಿಯನ್ನು ನಗರದ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಸಲ್ಲಿಸಿತು. 

ಚೆನ್ನೈ ಸಿಬಿಐ ತಂಡದ ಡಿವೈಎಸ್‍ಪಿ ರವಿ ಮತ್ತು ಸಿಬಿಐನ ಸರಕಾರಿ ವಕೀಲ ಸುಬೋದ್ ನೇತೃತ್ವದಲ್ಲಿ ಕೋರ್ಟ್ ಗೆ ಆಗಮಿಸಿದ 4 ಮಂದಿ ಸಿಬಿಐ ಅಧಿಕಾರಿಗಳು ತೆರೆದ ಕೋರ್ಟ್‍ನಲ್ಲಿ ಒಟ್ಟು 262 ಪುಟಗಳ ಸುದೀರ್ಘ ತನಿಖಾ ವರದಿಯನ್ನು ಸಲ್ಲಿಸಿದರು. ನ್ಯಾಯಾಲಯದ ನಿಯಮದಂತೆ ಸಿಬಿಐ ತಂಡ ನೀಡಿದ 262 ಪುಟಗಳ ವರದಿಯ ಕುರಿತು ವಿಸ್ತೃತ ಪರಿಶೀಲನೆ ನಡೆಸಿದ ಬಳಿಕ ಅಂಗೀಕರಿಸಲಾಯಿತು ಎಂದು ತಿಳಿದು ಬಂದಿದೆ. 

ಡಿವೈಎಸ್‍ಪಿ ಗಣಪತಿ ಸಾವಿನ ಕುರಿತಂತೆ ಮೃತರ ಸಂಬಂದಿಕರು ಜೆಎಂಎಫ್‍ಸಿ ಕೋರ್ಟ್ ಮೊರೆ ಹೋಗಿ ನಗರ ಪೊಲೀಸರಿಗೆ ಪ್ರಕರಣದ ಕುರಿತು ಎಫ್ಐಆರ್ ದಾಖಲಿಸಲು ಸೂಚಿಸುವಂತೆ ಮನವಿ ಮಾಡಿದ್ದರು. ಈ ಸಂದರ್ಭ ಅಂದಿನ ನ್ಯಾಯಮೂರ್ತಿಗಳು ನಗರ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುವಂತೆ ಸೂಚಿಸಿದ್ದರು. ಆದರೆ ರಾಜ್ಯ ಸರಕಾರ ಸಿಐಡಿಗೆ ಪ್ರಕರಣವನ್ನು ನೀಡಿದ ಪರಿಣಾಮ ನಗರದ ಪೊಲೀಸರಿಗೆ ತನಿಖೆ ನಡೆಸಲು ಸಾಧ್ಯವಾಗಲಿಲ್ಲ. 

ಸುಪ್ರಿಂ ಕೋರ್ಟ್‍ನ ನಿರ್ದೇಶನದಂತೆ ತನಿಖೆಯನ್ನು ಕೈಗೆತ್ತಿಕೊಂಡ ಚೆನೈ ಸಿಬಿಐ ತಂಡ ಕಳೆದ 3 ವರ್ಷಗಳಿಂದ ಹಲವು ಬಾರಿ ಕೊಡಗಿಗೆ ಆಗಮಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿತ್ತು.  

ಪ್ರಕರಣದ ಹಿನ್ನೆಲೆ
2017ರ ಜುಲೈ 7ರಂದು ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಿಂದ ಮಡಿಕೇರಿಗೆ ಆಗಮಿಸಿದ್ದ ಡಿವೈಎಸ್‍ಪಿ ಗಣಪತಿ, ನಗರದ ವಿನಾಯಕ ಲಾಡ್ಜ್ ನ 315ನೇ ನಂಬರ್ ನ ರೂಂ ಪಡೆದುಕೊಂಡಿದ್ದರು. ಆ ಬಳಿಕ ತಮ್ಮ ಬಳಿಯಿದ್ದ ವಿವಿಧ ದಾಖಲೆಗಳ ಸಹಿತ ಸಮವಸ್ತ್ರದಲ್ಲೇ ಆಟೋ ಒಂದರಲ್ಲಿ ಮಡಿಕೇರಿಯ ಸುದ್ದಿ ವಾಹಿನಿಯೊಂದಕ್ಕೆ ತೆರಳಿ ಕೆಲವರ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದರು.

ಅಂದಿನ ಗೃಹ ಸಚಿವ ಕೆ.ಜೆ.ಜಾರ್ಜ್, ಹಿರಿಯ ಐಪಿಎಸ್ ಅಧಿಕಾರಿಗಳಾದ ಎಡಿಜಿಪಿ ಎ.ಎಂ.ಪ್ರಸಾದ್ ಮತ್ತು ಗುಪ್ತಚರ ಇಲಾಖೆಯ ಪ್ರಣಾವ್ ಮೋಹಂತಿ ವಿರುದ್ಧ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಇಲಾಖೆ ಒಳಗಿನ ಕಿರುಕುಳ, ಹಳೆಯ ಪ್ರಕರಣವೊಂದರಲ್ಲಿ ತಪ್ಪಿಲ್ಲದಿದ್ದರೂ ತನ್ನನ್ನು ಸಿಲುಕಿಸುವ ಪ್ರಯತ್ನ, ಚರ್ಚ್ ಗಲಭೆ ವಿಚಾರದಲ್ಲಿ ಕಿರುಕುಳ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಗಣಪತಿ ಗಂಭೀರ ಆರೋಪ ಮಾಡಿದ್ದರು. 

ಮತ್ತೊಂದೆಡೆ ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಿಂದ ಡಿವೈಎಸ್‍ಪಿ ಗಣಪತಿ ಬೇರೆ ಊರಿಗೆ ತೆರಳಿರುವ ಮಾಹಿತಿ ಕೊಡಗು ಪೊಲೀಸ್  ಮೂಲಗಳಿಗೆ ರವಾನೆಯಾಗಿತ್ತು. ಡಿವೈಎಸ್‍ಪಿ ಗಣಪತಿ ಅವರ ಮೊಬೈಲ್ ಸಂಖ್ಯೆಯ ಜಾಡು ಹಿಡಿದ ಮಡಿಕೇರಿ ನಗರ ಪೊಲೀಸರು, ಸಂಜೆ 6 ಗಂಟೆಗೆ ವೇಳೆಗೆ ಮಡಿಕೇರಿಯಲ್ಲಿರುವುದನ್ನು ಪತ್ತೆ ಹಚ್ಚಿದರು. 

ಅಂತಿಮವಾಗಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿಯ ವಿನಾಯಕ ಲಾಡ್ಜ್ ಗೆ ತೆರಳಿ ಡಿವೈಎಸ್‍ಪಿ ಗಣಪತಿ ರೂಂ ಪಡೆದಿರುವುದನ್ನು ಖಾತ್ರಿ ಪಡಿಸಿಕೊಂಡರು. ನಂತರ ಕೋಣೆಯನ್ನು ಗಮನಿಸಿದಾಗ ಗಣಪತಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಪತ್ತೆಯಾಗಿತ್ತು. 

ನಂತರದ ಬೆಳವಣಿಗೆಯಲ್ಲಿ ಮೃತ ಗಣಪತಿ ಪೋಷಕರು ಸುಪ್ರೀಂ ಕೋರ್ಟ್ ಮೊರೆ ಹೋಗಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಮನವಿ ಮಾಡಿದ್ದರು. ಮನವಿಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ತನ್ನ ಮೇಲ್ವಿಚಾರಣೆಯಲ್ಲಿ ಚೆನೈ ಸಿಬಿಐ ತಂಡ ಪ್ರಕರಣವನ್ನು ತನಿಖೆ ನಡೆಸುವಂತೆ ಆದೇಶಿಸಿತ್ತು. ಇದೀಗ ಸಿಬಿಐ ತನಿಖೆಯ ಅಂತಿಮ ವರದಿ ನ್ಯಾಯಾಲಯದ ಬಳಿ ಇದ್ದು, ಹಲವು ಕುತೂಹಲಗಳಿಗೆ ಸಾಕ್ಷಿಯಾಗಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News