ಬಿಎಸ್‌ವೈಗೆ ಟಿಪ್ಪು ಸುಲ್ತಾನ್ ಸಾಧನೆ, ಇತಿಹಾಸದ ಬಗ್ಗೆ ಪಾಠ ಹೇಳಿದ ದಿನೇಶ್ ಗುಂಡೂರಾವ್

Update: 2019-10-30 17:53 GMT

ಬೆಂಗಳೂರು, ಅ.30: ಇತಿಹಾಸದ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಪಠ್ಯವನ್ನು ಕೈ ಬಿಡಲು ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿದ್ದು, ಒಬ್ಬ ಅಜ್ಞಾನಿ, ತಿಳುವಳಿಕೆ ಇಲ್ಲದ, ಇತಿಹಾಸವನ್ನು ಅಧ್ಯಯನ ಮಾಡದೇ ಇರುವವರು ಮಾತ್ರ ಈ ರೀತಿ ವರ್ತಿಸಲು ಸಾಧ್ಯ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.

ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರಾಠರು ಹಾಗೂ ನಿಝಾಮರು ಬ್ರಿಟೀಷರ ಜೊತೆ ಶಾಮೀಲಾಗಿ ಟಿಪ್ಪು ವಿರುದ್ಧ ಯುದ್ಧ ಮಾಡುತ್ತಾರೆ. ಬ್ರಿಟಿಷರ ಜೊತೆ ಕೈ ಜೋಡಿಸಿದಕ್ಕಾಗಿ ಮರಾಠ ಹಾಗೂ ನಿಝಾಮರನ್ನು ದೇಶದ್ರೋಹಿಗಳೆಂದು ಕರೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಟಿಪ್ಪು ಸುಲ್ತಾನ್ ಹೆಸರು ಹಾಗೂ ಅವರು ಮಾಡಿರುವ ಸಾಧನೆಗಳು ವಿಶ್ವಮಟ್ಟದಲ್ಲಿ ದಾಖಲಾಗಿದೆ. ರೇಷ್ಮೆ ತಂತ್ರಜ್ಞಾನ ರಾಜ್ಯಕ್ಕೆ ಬರಲು ಟಿಪ್ಪು ಸುಲ್ತಾನ್ ಕಾರಣ, ಕ್ಷಿಪಣಿ ತಂತ್ರಜ್ಞಾನದಲ್ಲಿ ಟಿಪ್ಪು ಸುಲ್ತಾನ್ ಇಡೀ ವಿಶ್ವದಲ್ಲಿ ಮುಂಚೂಣಿಯಲ್ಲಿದ್ದ ವ್ಯಕ್ತಿ ಎಂದು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಬಣ್ಣಿಸಿದ್ದಾರೆ. ನಮ್ಮ ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿಧಾನಸಭೆಯಲ್ಲಿ ಮಾಡಿದ ಭಾಷಣದಲ್ಲಿ ಟಿಪ್ಪು ಸುಲ್ತಾನ್ ಸಾಧನೆ, ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ ಎಂದು ಅವರು ಹೇಳಿದರು.

ಈ ಎಲ್ಲ ವಿಚಾರಗಳು ಯಡಿಯೂರಪ್ಪಗೆ ಗೊತ್ತಿದೆಯೇ, ಅವರು ಇತಿಹಾಸದ ಪುಸ್ತಕಗಳನ್ನು ಓದಿದ್ದಾರೆಯೇ? ಬ್ರಿಟಿಷರ ವಿರುದ್ಧ ನಾಲ್ಕು ಬಾರಿ ಯುದ್ಧ ಮಾಡಿ, ಶರಣಾಗತರಾಗದೆ ಹೋರಾಟ ಮಾಡಿದವರು ಟಿಪ್ಪು ಸುಲ್ತಾನ್. ರಾಜ್ಯಕ್ಕಾಗಿ ತಮ್ಮ ಮಕ್ಕಳನ್ನೆ ಒತ್ತೆ ಇಟ್ಟರು. ಆಗಿನ ಕಾಲದಲ್ಲಿ ಅನೇಕ ರಾಜರು ಪರಸ್ಪರ ಮತ್ತೊಬ್ಬ ರಾಜರ ಮೇಲೆ ಯುದ್ಧ ಮಾಡುವಾಗ ಕೆಲವು ಘಟನೆಗಳು ನಡೆದಿರಬಹುದು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಆದರೆ, ಇತಿಹಾಸದ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಹೆಸರೇ ಇರಬಾರದು ಅನ್ನುವ ಮಟ್ಟಕ್ಕೆ ಹೋಗಿರುವ ಬಿಜೆಪಿಯವರಿಗೆ ಬೇರೆ ಯಾವುದೇ ವಿಷಯಗಳಿಲ್ಲ. ಈ ದೇಶದಲ್ಲಿ ಇಂತಹ ವಿಚಾರಗಳೇ ಚರ್ಚೆಯಾಗಬೇಕು, ಇದನ್ನೇ ಮಾತನಾಡಬೇಕು, ನಮ್ಮ ವಿಮರ್ಶೆಗಳು, ಚರ್ಚೆಗಳಿಗೆ ಅವಕಾಶ ನೀಡದಂತಹ ಸಿದ್ಧಾಂತ ರೂಪಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರು ಇಲ್ಲಿನ ಪಠ್ಯ ಪುಸ್ತಕಗಳಲ್ಲಿ ಟಿಪ್ಪು ಸುಲ್ತಾನ್ ಹೆಸರು ಕೈ ಬಿಟ್ಟರೂ ಅಂತರ್‌ರಾಷ್ಟ್ರೀಯ ಮಟ್ಟದ ಪುಸ್ತಕಗಳಲ್ಲಿ ಅವರ ಬಗ್ಗೆ ಓದುತ್ತಾರೆ, ಇಡೀ ದೇಶದಲ್ಲಿ ಹಲವಾರು ಪುಸ್ತಕಗಳಲ್ಲಿ ಅವರ ಬಗ್ಗೆ ಅನೇಕ ವಿಚಾರಗಳಿವೆ, ಚಲನಚಿತ್ರಗಳು, ಧಾರಾವಾಹಿಗಳು ಬಂದಿವೆ. ಸಾವರ್ಕರ್ ಬಗ್ಗೆ ನಮ್ಮ ಅಭಿಪ್ರಾಯವೂ ಇದೆ, ನಿಮ್ಮ ಅಭಿಪ್ರಾಯವೂ ಇದೆ. ಅದರ ಅರ್ಥ ನಾವು ಅಧಿಕಾರಕ್ಕೆ ಬಂದರೆ ಸಾವರ್ಕರ್‌ರನ್ನು ಇತಿಹಾಸದ ಪುಸ್ತಕದಿಂದ ಕೈ ಬಿಡುತ್ತೇವೆ ಎಂದರ್ಥವಲ್ಲ ಎಂದು ಅವರು ಹೇಳಿದರು.

ಟಿಪ್ಪು ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಯಾಗಲಿ, ಶೃಂಗೇರಿ ಮಠಕ್ಕೆ ಮರಾಠರು ದಾಳಿ ಮಾಡಿದಾಗ ಮಠಕ್ಕೆ ರಕ್ಷಣೆ ನೀಡಿದ್ದು ಟಿಪ್ಪು ಸುಲ್ತಾನ್, ನಂಜನಗೂಡು ಸೇರಿದಂತೆ ಅನೇಕ ದೇವಾಲಯಗಳಿಗೆ ಸಹಾಯ, ಭೂಮಿ ನೀಡಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರ ರಾಣಿ ಚನ್ನಮ್ಮ, ಟಿಪ್ಪು ಸುಲ್ತಾನ್, ಲಕ್ಷ್ಮಿ ಬಾಯಿ ಅವರಂತಹ ವ್ಯಕ್ತಿಗಳ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಟಿಪ್ಪು ಸುಲ್ತಾನ್ ಹೆಸರು, ಸಾಧನೆಯನ್ನು ಇತಿಹಾಸದಿಂದ ಕೈ ಬಿಡಲು ಸಾಧ್ಯವಿಲ್ಲ. ಬಿಜೆಪಿಯವರು ಈ ರೀತಿಯ ಕೆಲಸಗಳಿಂದ ಅವರಿಗೆ ಮತ್ತಷ್ಟು ಪ್ರಚಾರ ನೀಡುತ್ತಿದ್ದಾರೆ. ದಿಲ್ಲಿಯಲ್ಲಿ ಸಿಖ್ಖರ ಮಾರಣಹೋಮ, ಗುಜರಾತ್‌ನಲ್ಲಿ ಎರಡು ಸಾವಿರ ಜನರ ನರಮೇಧ ಆದಾಗ ಯಾರು ಮುಖ್ಯಮಂತ್ರಿ ಆಗಿದ್ದರು. ಅಲ್ಲಿನ ಸರಕಾರ ಏನು ಮಾಡಿತು. ಈ ವಿಷಯಗಳನ್ನು ಇತಿಹಾಸದಿಂದ ತೆಗೆಯಲು ಸಾಧ್ಯವೇ ಎಂದು ಅವರು ಹೇಳಿದರು.

ಯಡಿಯೂರಪ್ಪಗೆ ಜನರಿಗೆ ನ್ಯಾಯ ಕೊಡಲು ಆಗುತ್ತಿಲ್ಲ. ಪ್ರವಾಹ ಪೀಡಿತ ಪ್ರದೇಶಗಳಿಗೆ ಹೋಗಲು ಸಾಧ್ಯವಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ಇಂತಹ ಮಾತುಗಳನ್ನು ಹೇಳಲಾಗುತ್ತಿದೆ. ದೇಶದಲ್ಲಿ ಕೆಟ್ಟ ಪರಿಸ್ಥಿತಿ ಇದೆ. ಅದನ್ನು ಸರಿಪಡಿಸುವುದನ್ನು ಬಿಟ್ಟು, ಅವರ ಕೋಮುವಾದದ ಸಿದ್ಧಾಂತವನ್ನು ಜನರ ಮೇಲೆ ಹೇರಲು ಹೋಗುತ್ತಿದ್ದಾರೆ. ಇಂತಹ ಅವಿವೇಕದ ತೀರ್ಮಾನವನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News