ಕಾರ್ಯಕರ್ತರ ಬಂಧನ ವಿರುದ್ಧ ಕಾನೂನು ಹೋರಾಟ: ಪಿಎಫ್‍ಐ ಮಂಡ್ಯ ಜಿಲ್ಲಾಧ್ಯಕ್ಷ ಎಂ.ಎಫ್.ರಫೀಕ್

Update: 2019-10-30 18:27 GMT

ಮಂಡ್ಯ, ಅ.30: ‘ಯೂನಿಟಿ ಮಾರ್ಚ್’ಗೆ ಪೂರ್ವಭಾವಿಯಾಗಿ ಕೆ.ಆರ್.ಪೇಟೆ ತಾಲೂಕಿನ ಆಲಂಬಾಡಿ ಕಾವಲ್‍ನಲ್ಲಿ ಪೆರೇಡ್ ನಡೆಸುತ್ತಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‍ಐ) ಅಮಾಯಕ ಕಾರ್ಯಕರ್ತರ ಅಕ್ರಮ ಬಂಧನ ಮತ್ತು ಪೂರ್ವಾಗ್ರಹ ಪೀಡಿತ ಕೆಲವು ಮಾಧ್ಯಮಗಳ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಎಂ.ಎಫ್.ರಫೀಕ್ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭ್ಯಾಸದಲ್ಲಿ ತೊಡಗಿದ್ದ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ವಿನಾಕಾರಣ ಬಂಧಿಸಿರುವುದು ಮತ್ತು ಘಟನೆಯನ್ನು ಕಪೋಲಕಲ್ಪಿತವಾಗಿ ಪೂರ್ವಾಗ್ರಹ ಪೀಡಿತ ವರದಿ ಪ್ರಕಟಿಸಿದ ಕೆಲವು ಮಾಧ್ಯಮಗಳ ಧೋರಣೆಯನ್ನು ಖಂಡಿಸುತ್ತೇವೆ ಎಂದರು.

ಪಿಎಫ್‍ಐ 11 ವರ್ಷದಿಂದ ಫೆಬ್ರವರಿ 17ರ ಸಂಸ್ಥಾಪನಾ ದಿನದಂದು ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿರುವ ಯುನಿಟಿ ಮಾರ್ಚ್‍ಗಾಗಿ ಆಲಂಬಾಡಿಯ ಗೌಸ್‍ಪೀರ್ ದರ್ಗಾ ಬಳಿ ಸ್ಥಳೀಯ ಕಾರ್ಯಕರ್ತರು ಪೆರೇಡ್ ಅಭ್ಯಾಸ ನಡೆಸುತ್ತಿದ್ದರು. ಆದರೆ, ಕೆಲವು ಸ್ಥಳೀಯ ಕೋಮುವಾದಿ ಸಂಘಟನೆಗೆ ಸೇರಿದ ಕಾರ್ಯಕರ್ತರು ನೀಡಿದ ಮಾಹಿತಿ ಆಧಾರದಲ್ಲಿ ಪೊಲೀಸರು ಸತ್ಯಾಸತ್ಯತೆ ತಿಳಿಯದೆ ವಶಕ್ಕೆ ಪಡೆದಿರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅವರು ಪ್ರತಿಪಾದಿಸಿದರು.

ಸಾಮಾನ್ಯ ಘಟನೆಯನ್ನು ಸಂಪೂರ್ಣವಾಗಿ ತಿರುಚಿ ಕೆಲವು ಮಾಧ್ಯಮಗಳು ಸಂಘಟನೆಯ ವರ್ಚಸ್ಸಿಗೆ ಮಸಿ ಬಳಿಯು ಹುನ್ನಾರದ ಭಾಗವಾಗಿ ಸುಳ್ಳುಸುದ್ದಿಯನ್ನು ಪ್ರಸಾರ ಮಾಡುತ್ತಿರುವುದು ಪತ್ರಿಕಾ ಧರ್ಮದ ಉಲ್ಲಂಘನೆಯಾಗಿದೆ. ಮಾಧ್ಯಮಗಳ ಇಂತಹ ಧೋರಣೆಯಿಂದಾಗಿ ನಾಡಿನ ಶಾಂತಿಯು ಕದಡುವ ಅಪಾಯವಿದೆ. ಪೊಲೀಸ್ ವರಿಷ್ಠಾಧಿಕಾರಿಗಳ ಸ್ಪಷ್ಟೀಕರಣಕ್ಕೆ ವ್ಯತಿರಿಕ್ತವಾಗಿ ವರದಿ ಪ್ರಕಟಿಸುತ್ತಿರುವ ಮಾಧ್ಯಮದ ಉದ್ದೇಶವು ಸ್ಪಷ್ಟವಾಗಿದೆ ಎಂದು ಅವರು ಕಿಡಿಕಾರಿದರು.

ಪಿಎಫ್‍ಐ ತಳಮಟ್ಟದ ಜನರ ವಡುವೆಯೇ ಬೆಳೆದ ಒಂದು ಬಲಿಷ್ಠ ಸಂಘಟನೆಯಾಗಿದೆ. ಸಾಮಾಜಿಕ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿದೆ. ಶೋಷಿತ ವರ್ಗದ ಪರವಾಗಿ ಧ್ವನಿ ಎತ್ತುತ್ತಿರುವುದನ್ನು ಸಹಿಸಲಾರದ ಸ್ಥಾಪಿತ ಹಿತಾಸಕ್ತಿಗಳು ಸಂಘಟನೆಯ ವರ್ಚಸ್ಸಿಗೆ ಧಕ್ಕೆ ತರುವ ಯತ್ನ ಮಾಡುತ್ತಿವೆ ಎಂದು ಅವರು ಆರೋಪಿಸಿದರು.

ಸಂಘಟನೆಯ ಜಿಲ್ಲಾ ಸಮಿತಿ ಸದಸ್ಯ ಮುಹಮ್ಮದ್ ಷರೀಫ್ ಹಾಗು ಎಸ್‍ಡಿಪಿಐ ಉಪಾಧ್ಯಕ್ಷ ಮುಹಮ್ಮದ್ ತಾಹೇರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.​

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News