ರಾಜ್ಯ ಉಪಚುನಾವಣೆ: ಯಾರಿಗುಂಟು, ಯಾರಿಗಿಲ್ಲ?

Update: 2019-10-30 18:32 GMT

ದೇಶದ ಹಲವೆಡೆ ಉಪಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದರೆ, ಇತ್ತ ಕರ್ನಾಟಕ ಮಾತ್ರ ಉಪಚುನಾವಣೆಯ ಸಿದ್ಧತೆಯಲ್ಲಿದೆ. ಅನರ್ಹ ಶಾಸಕರ 'ಗತಿ'ಯೇನು ಎನ್ನುವುದನ್ನು ಸುಪ್ರೀಂಕೋರ್ಟ್ ಇನ್ನೂ ಹೇಳಿಲ್ಲದ ಕಾರಣ, ಬಿಜೆಪಿಯೊಳಗೆ ಆತಂಕದ ವಾತಾವರಣ ಮುಂದುವರಿದಿದೆ. ಒಂದು ವೇಳೆ ಈ ಉಪಚುನಾವಣೆಯನ್ನು ಬಿಜೆಪಿ ಸೋತದ್ದೇ ಆದರೆ ಅದಕ್ಕಾಗಿ ಯಡಿಯೂರಪ್ಪ ತಮ್ಮ ಸರಕಾರವನ್ನೇ ದಂಡವಾಗಿ ತೆರಬೇಕಾಗುತ್ತದೆ. ಈ ಹಿನ್ನೆಲೆಯಲ್ಲೇ ಇರಬೇಕು, ಇತ್ತೀಚೆಗೆ ಸಿದ್ದರಾಮಯ್ಯ ಅವರು ''ಮುಂದಿನ ಮುಖ್ಯಮಂತ್ರಿ ನಾನೇ'' ಎಂಬ ಹೇಳಿಕೆ ನೀಡಿರುವುದು. ಈ ಹೇಳಿಕೆಗೆ ಪ್ರತಿಯಾಗಿ ಜೆಡಿಎಸ್ ನಾಯಕ ಕುಮಾರ ಸ್ವಾಮಿ ''ಬಿಜೆಪಿ ಸರಕಾರವನ್ನು ಉರುಳಿಸಿದರೆ ನಾವು ಬೆಂಬಲ ನೀಡುತ್ತೇವೆ'' ಎಂಬ ಅರ್ಥದ ಹೇಳಿಕೆಯನ್ನು ನೀಡಿದ್ದಾರೆ. ಈ ಹೇಳಿಕೆ, ಪ್ರತಿ ಹೇಳಿಕೆಗಳ ಮೇಲೆ ಭವಿಷ್ಯದ ರಾಜ್ಯ ರಾಜಕೀಯ ನಿಂತಿದೆ. ಉಪಚುನಾವಣೆಯ ಬಳಿಕ ಸರಕಾರ ಉರುಳುವ ಸಾಧ್ಯತೆಗಳೇ ಎದ್ದು ಕಾಣುತ್ತಿದೆ. ಒಂದು ವೇಳೆ ಸರಕಾರ ಬಿದ್ದು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷ ಮತ್ತೆ ಬಹುಮತವನ್ನು ಪಡೆದದ್ದೇ ಆದರೆ ಯಾರು ಮುಖ್ಯಮಂತ್ರಿಯಾಗಬೇಕು ಎನ್ನುವ ಪ್ರಶ್ನೆ ಮಹತ್ವವನ್ನು ಪಡೆಯುತ್ತದೆ.

''ಈ ಬಾರಿ ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಬೇಕು'' ಎನ್ನುವ ಸಂದೇಶವನ್ನು ಸಿದ್ದರಾಮಯ್ಯ ಅವರು ಜೆಡಿಎಸ್‌ಗೆ ತಲುಪಿಸಿದ್ದಾರೆ. ಆದರೆ ಇದನ್ನು ಸ್ಪಷ್ಟವಾಗಿ ನಿರಾಕರಿಸಿರುವ ಜೆಡಿಎಸ್ ತನ್ನ ಪ್ರತಿ ಹೇಳಿಕೆಯ ಮೂಲಕ ''ನಮಗೆ ಅಧಿಕಾರ ಕೊಡದೇ ಇದ್ದರೆ ನಾವು ಬಿಜೆಪಿಯೊಟ್ಟಿಗೆ ಸೇರಿ ಸರಕಾರ ರಚಿಸಲು ಅಥವಾ ಅವರಿಗೆ ಬೆಂಬಲ ನೀಡಿ ಅಧಿಕಾರ ಪಡೆಯಲು ಹಿಂಜರಿಯುವುದಿಲ್ಲ'' ಎಂದು ಬೆದರಿಸಿದೆ. ಆದರೆ ಈ ಬೆದರಿಕೆಗೆ ಅಂಜುವಂತಹ ಅನಿವಾರ್ಯ ಸದ್ಯಕ್ಕೆ ಕಾಂಗ್ರೆಸ್‌ಗೆ ಇಲ್ಲ. ಮುಖ್ಯಮಂತ್ರಿ ಸ್ಥಾನವೋ ಅಥವಾ ಉಪಮುಖ್ಯಮಂತ್ರಿ ಸ್ಥಾನವೋ ಜೆಡಿಎಸ್‌ಗೆ ದೊರಕಿದರೆ ಅದು ಬಿಜೆಪಿಯೊಂದಿಗೆ ಮೈತ್ರಿಮಾಡಿಕೊಳ್ಳುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಕಾಂಗ್ರೆಸ್ ಅವಸರದಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವುದೇ, ಅದು ಬಿಜೆಪಿಯೊಂದಿಗೆ ಕೈ ಜೋಡಿಸಬಾರದು ಎನ್ನುವ ಕಾರಣಕ್ಕಾಗಿ. ಆದರೆ ಡಿ.ಕೆ. ಶಿವಕುಮಾರ್ ಅವರ ಅವಸರ, ಕಾಂಗ್ರೆಸ್‌ಗೆ ಸಾಕಷ್ಟು ನಷ್ಟವನ್ನು ಉಂಟು ಮಾಡಿತು. ಕಾಂಗ್ರೆಸ್‌ಗಿಂತ ಕಡಿಮೆ ಸ್ಥಾನ ಪಡೆದ ಜೆಡಿಎಸ್‌ಗೆ ಪೂರ್ಣಾವಧಿ ಮುಖ್ಯಮಂತ್ರಿ ಸ್ಥಾನ ದೊರಕಿತು ಮಾತ್ರವಲ್ಲ, ಕಾಂಗ್ರೆಸ್‌ನ ಅನಿವಾರ್ಯವನ್ನು ಜೆಡಿಎಸ್ ದುರ್ಬಳಕೆ ಮಾಡಿಕೊಂಡಿತು.

ಲೋಕಸಭಾ ಚುನಾವಣೆಯಲ್ಲಿ ಇದರ ಲಾಭವನ್ನು ತನ್ನದಾಗಿಸಿಕೊಳ್ಳಬಹುದು ಎಂದು ಕಾಂಗ್ರೆಸ್ ಭಾವಿಸಿತ್ತು. ಆದರೆ ಜೆಡಿಎಸ್ ಜೊತೆಗಿನ ಮೈತ್ರಿ ಕಾಂಗ್ರೆಸ್‌ಗೆ ಯಾವ ರೀತಿಯಲ್ಲೂ ಲಾಭವಾಗಲಿಲ್ಲ. ಜೆಡಿಎಸ್-ಕಾಂಗ್ರೆಸ್ ಜೊತೆಯಾಗಿ ಸ್ಪರ್ಧಿಸಿದರೂ ಬಿಜೆಪಿ ಅಭೂತಪೂರ್ವ ಜಯವನ್ನು ತನ್ನದಾಗಿಸಿಕೊಂಡಿತು. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಪರಸ್ಪರ ಕಾಲೆಳೆದುಕೊಂಡು ಹೀನಾಯ ಸೋಲು ಕಂಡರು. ಮಾತ್ರವಲ್ಲ, ಮೈತ್ರಿ ಸರಕಾರ ರಚನೆಯಿಂದ ಕಾಂಗ್ರೆಸ್‌ಗೆ ಎಳ್ಳಷ್ಟು ಲಾಭವಾಗಲಿಲ್ಲ. ಕುಮಾರಸ್ವಾಮಿಯ ಪಾಲಿಗೆ 'ಮುಖ್ಯಮಂತ್ರಿ ಸ್ಥಾನ' ಸಿಕ್ಕಿದ್ದು ಸೀರುಂಡೆಯಾಯಿತು. ಜೊತೆಗೆ ಜೆಡಿಎಸ್ ಇನ್ನಷ್ಟು ಬೆಳೆಯಿತು.

ಉಪಚುನಾವಣೆಯಲ್ಲಿ ಬಿಜೆಪಿ ಸೋತದ್ದೇ ಆದರೆ, ಮತ್ತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪುನರ್‌ಸ್ಥಾಪನೆಯಾಗುತ್ತದೆಯೇ ಎನ್ನುವುದು ಈಗ ಇರುವ ಪ್ರಶ್ನೆ. ಹಾಗೆ ಪುನರ್ ಸ್ಥಾಪನೆಯಾದರೆ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಮುಂದುವರಿಯುತ್ತಾರೆಯೇ ಎನ್ನುವುದು ಇನ್ನೊಂದು ಮುಖ್ಯ ಪ್ರಶ್ನೆ. ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಲು ಕಾಂಗ್ರೆಸ್ ಒಳಗಿನ ಶಾಸಕರು ಅವಕಾಶ ನೀಡುವುದಿಲ್ಲ. ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಾರೆ. ಇದು ಜೆಡಿಎಸ್‌ಗೆ ಅಪಥ್ಯ. 'ನಾನು ಬಿಜೆಪಿಗೆ ಬೆಂಬಲ ನೀಡುತ್ತೇನೆ' ಎನ್ನುತ್ತಿದ್ದಾರೆ ಕುಮಾರಸ್ವಾಮಿ. ಆದರೆ ಅದರಿಂದ ಕಾಂಗ್ರೆಸ್‌ಗೆ ನಷ್ಟಕ್ಕಿಂತ ಲಾಭವೇ ಜಾಸ್ತಿ. ಯಾಕೆಂದರೆ ಮುಂದಿನ ವಿಧಾನಸಭೆಯಲ್ಲಿ ಜಾತ್ಯತೀತ ಮತಗಳು ಮತ್ತೆ ಜೆಡಿಎಸ್‌ನಿಂದ ದೂರವಾಗುತ್ತವೆ. ಬಿಜೆಪಿಗೆ ಬೆಂಬಲ ನೀಡಿದಾಕ್ಷಣ ಆ ಪಕ್ಷ, ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಸಾಧ್ಯತೆಗಳಿಲ್ಲ. ರೇವಣ್ಣ ಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡುವ ಸಾಧ್ಯತೆಗಳಿವೆ. ಆ ಸ್ಥಾನವನ್ನು ಕಾಂಗ್ರೆಸ್ ಕೂಡ ನೀಡಬಹುದಾಗಿದೆ. ಬಿಜೆಪಿಯ ಸ್ನೇಹದಿಂದ ಅಧಿಕಾರವೇನೋ ಸಿಗಬಹುದು, ಆದರೆ ಮತ್ತೆ 'ಸಮಯ ಸಾಧಕ' ರಾಜಕಾರಣಕ್ಕಾಗಿ ಜೆಡಿಎಸ್ ಚರ್ಚೆಗೊಳಗಾಗುತ್ತದೆ. ಆದುದರಿಂದ, ಅದೇನೇ ಬೆದರಿಕೆ ಒಡ್ಡಿದರೂ, ಸದ್ಯಕ್ಕೆ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವುದೇ ಜೆಡಿಎಸ್ ಮುತ್ಸದ್ದಿತನ. ಆದರೆ ಮುಖ್ಯಮಂತ್ರಿ ಸ್ಥಾನ ದೊರಕದೆ ಈ ಬಾರಿ ಕಾಂಗ್ರೆಸ್ ಪಕ್ಷ ಜೆಡಿಎಸ್‌ನೊಂದಿಗೆ ಕೈಜೋಡಿಸುವುದು ಕಷ್ಟ.
 
ಐಟಿ ತನಿಖೆಯಿಂದಾಗಿ ಸಂಕಟಕ್ಕೆ ಸಿಲುಕಿಕೊಂಡಿರುವ ಡಿಕೆಶಿಗೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದು ಇಷ್ಟವಿಲ್ಲದ ಸಂಗತಿ. ಮುಖ್ಯಮಂತ್ರಿ ಸ್ಥಾನದ ಬೇಡಿಕೆಯಿಡಲು ಸ್ವತಃ ಡಿಕೆಶಿಯವರೇ ಜೆಡಿಎಸ್‌ಗೆ ಕುಮ್ಮಕ್ಕು ನೀಡುವ ಸಾಧ್ಯತೆಗಳಿವೆ. ಒಂದು ವೇಳೆ ಜೆಡಿಎಸ್‌ಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದಾದರೆ ಇಂಥವರನ್ನೇ ಕಾಂಗ್ರೆಸ್ ಮುಖ್ಯಮಂತ್ರಿ ಮಾಡಬೇಕು ಎಂಬ ಒತ್ತಡ ಹೇರುವ ಸಾಧ್ಯತೆಗಳಿವೆ. ಆಗ 'ದಲಿತ ಮುಖ್ಯಮಂತ್ರಿ' ಆಗ್ರಹ ಮುನ್ನೆಲೆಗೆ ಬರಬಹುದು. ಬಹುಶಃ ಜೆಡಿಎಸ್ ಪಕ್ಷ ಕಾಂಗ್ರೆಸ್‌ನ ಜೊತೆಗೆ ಮೈತ್ರಿ ಮಾಡಿಕೊಳ್ಳಬೇಕಾದರೆ ಒಂದೋ ಮುಖ್ಯಮಂತ್ರಿ ಸ್ಥಾನದ ಬೇಡಿಕೆಯಿಡಬಹುದು. ಒಂದು ವೇಳೆ ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕಾದರೆ, ಅದು ದಲಿತ ನಾಯಕನನ್ನು ಮುಖ್ಯಮಂತ್ರಿಯಾಗಿ ಮಾಡಬೇಕು ಎನ್ನುವ ಬೇಡಿಕೆಯನ್ನು ಮುಂದಿಡಬಹುದು. ಆ ಮೂಲಕ ಸಿದ್ದರಾಮಯ್ಯರನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಗಳು ಎದ್ದು ಕಾಣುತ್ತದೆ. ಒಟ್ಟಿನಲ್ಲಿ ಉಪಚುನಾವಣೆಗಳಲ್ಲಿ ಎಲ್ಲ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದರೂ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುವುದು ಸುಲಭವಿಲ್ಲ.

ಆದರೆ ಇದೇ ಸಂದರ್ಭದಲ್ಲಿ, ರಾಜ್ಯ ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವಾಗ, ನೆರೆಸಂತ್ರಸ್ತರು ಪರಿಹಾರ ಕಾರ್ಯಗಳಿಗಾಗಿ ಬೊಬ್ಬಿಡುತ್ತಿರುವಾಗ ಈಗಷ್ಟೇ ರಚನೆಯಾಗಿರುವ ಸರಕಾರವೊಂದು ಉರುಳಿ, ಮತ್ತೆ ಹೊಸ ಸರಕಾರ ರಚನೆಯಾಗುವುದು ಎಷ್ಟರಮಟ್ಟಿಗೆ ಸರಿ? ಮತ್ತು ಇತ್ತ ಸರಕಾರ ಉರುಳಿದ್ದೇ ಆದರೆ ಅದಕ್ಕಾಗಿ ವಿಪಕ್ಷಗಳನ್ನು ಟೀಕಿಸುವ ನೈತಿಕತೆಯೂ ಬಿಜೆಪಿಗೆ ಇಲ್ಲದಂತಾಗಿದೆ. ಯಾಕೆಂದರೆ ಅನೈತಿಕ ದಾರಿಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಬಿಜೆಪಿಯೊಳಗೇ ಹಲವರು ಸರಕಾರವನ್ನು ಉರುಳಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಉಪಚುನಾವಣೆಯ ಫಲಿತಾಂಶಕ್ಕಾಗಿ ಅವರೂ ಕಾಯುತ್ತಿದ್ದಾರೆ. ಬಹುಶಃ ರಾಜ್ಯ ರಾಜಕೀಯ ಅತ್ಯಂತ ಅರಾಜಕ ಸ್ಥಿತಿಯಲ್ಲಿದೆ. ಉಪಚುನಾವಣೆ ಆ ಅರಾಜಕತೆಯನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಬಹುದು. ಬಹುಶಃ ಮತ್ತೊಂದು ವಿಧಾನಸಭಾ ಚುನಾವಣೆಯೇ ಇವೆಲ್ಲದಕ್ಕೂ ಸ್ಪಷ್ಟ ಉತ್ತರವನ್ನು ನೀಡಬಹುದೇನೋ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News