ರಾಜ್ಯಾದ್ಯಂತ ನ.5 ರಿಂದ ‘ಟಿಪ್ಪು ಮರೆಯಲಾಗದ ದಂತಕಥೆ’ ಅಭಿಯಾನ

Update: 2019-10-31 14:02 GMT

ಮಡಿಕೇರಿ, ಅ.31: ಟಿಪ್ಪುವಿನ ಇತಿಹಾಸ, ಆದರ್ಶ ಹಾಗೂ ಕೊಡುಗೆಯನ್ನು ಕಾಪಾಡುವ ಮತ್ತು ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಸುವ ನಿಟ್ಟಿನಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಸಮಿತಿಯು ನ.5 ರಿಂದ 25ರ ವರೆಗೆ ‘ಟಿಪ್ಪು ಮರೆಯಲಾಗದ ದಂತಕಥೆ’ ಎಂಬ ಅಭಿಯಾನವನ್ನು ರಾಜ್ಯಾದ್ಯಂತ ನಡೆಸಲಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಪ್ಪು ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ಆದರೆ ಟಿಪ್ಪು ಮಾಡಿದ ಎಲ್ಲಾ ಪ್ರಗತಿಪರ ಕೆಲಸಗಳನ್ನು ಈ ದೇಶದ ಫ್ಯಾಶಿಸ್ಟ್ ಸರ್ಕಾರ ಹಾಗೂ ಮನುವಾದಿ ಇತಿಹಾಸಕಾರರು ಮರೆಮಾಚುವ ಮತ್ತು ತಿರುಚುವ ಷಡ್ಯಂತ್ರ ನಡೆಸಿದ್ದಾರೆ ಎಂದು ಆರೋಪಿಸಿದರು. ‘ಟಿಪ್ಪು ಮರೆಯಲಾಗದ ದಂತಕಥೆ’  ಅಭಿಯಾನದಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ, ಕವನ, ಚಿತ್ರಕಲಾ ಸ್ಪರ್ಧೆ ಹಾಗೂ ವಿಶೇಷವಾಗಿ ಮಕ್ಕಳಿಗೆ ‘ಛೋಟಾ ಸುಲ್ತಾನ್’ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು.

ಟಿಪ್ಪು ಸುಲ್ತಾನ್ ಸುಮಾರು 200 ವರ್ಷಗಳ ಹಿಂದೆ ಸಾಮ್ರಾಜ್ಯ ಸ್ಥಾಪಿಸಿ, ಬ್ರಿಟಿಷರ ವಿರುದ್ಧ ಶೌರ್ಯದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಶೈಲಿಯು  ಇಂದಿಗೂ ಕೂಡ ಸ್ಫೂರ್ತಿದಾಯಕವಾಗಿದೆ. ಆದರೆ ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಟಿಪ್ಪು ಜಯಂತಿಯನ್ನು ರದ್ದುಮಾಡಿ ಟಿಪ್ಪು ಹೆಸರಿನಲ್ಲಿ ರಾಜಕೀಯ ಮಾಡಲಾರಂಭಿಸಿದೆ. ಅಲ್ಲದೇ, ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎದ್ದಾಗಲೆಲ್ಲಾ ಭಾವನಾತ್ಮಕ ವಿಷಯಗಳಿಗೆ ರಾಜಕೀಯ ಮಾಡುವುದು ಬಿಜೆಪಿಯ ಬಂಡವಾಳವಾಗಿದೆ. ಬಿಜೆಪಿ ಸರ್ಕಾರ ಅವರದ್ದೆ ಪಕ್ಷದ ಶಾಸಕರಿಂದ ಪತ್ರ ಬರೆಸಿ, ಟಿಪ್ಪುವಿನ ಇತಿಹಾಸವನ್ನು ವಿದ್ಯಾರ್ಥಿಗಳ ಶಿಕ್ಷಣದಿಂದಲೇ ಮರೆಮಾಚುವ ಹುನ್ನಾರ ಮಾಡಿದ್ದು, ಇದು ದೇಶಕ್ಕೆ ಎಸೆಗುವ ದ್ರೋಹವಾಗಿದೆ ಎಂದು ಆರೋಪಿಸಿದರು.

ಒಂದು ವೇಳೆ ಪಠ್ಯದಿಂದ ಟಿಪ್ಪುವಿನ ಇತಿಹಾಸವನ್ನು ಸರ್ಕಾರ ತೆಗೆಯಲು ಮುಂದಾದರೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಸಮಿತಿಯ ರಾಜ್ಯ ಕಾರ್ಯದರ್ಶಿ ಅಥಾವುಲ್ಲಾ ಪೂಂಜಲ್‍ಕಟ್ಟೆ, ಸದಸ್ಯರಾದ ಮಹಮ್ಮದ್ ರಿಯಾಝ್ ಹಾಗೂ ಪಿ.ಜೆ.ಇಮ್ರಾನ್ ಉಪಸ್ಥಿತರಿದ್ದರು. 

ಸ್ಪರ್ಧೆಯಲ್ಲಿ ಭಾಗವಹಿಸುವವರು ಸಂಬಂಧ ಪಟ್ಟ ವಿಷಯದ ಭಾವಚಿತ್ರವನ್ನು campusfrontofindia.kar@gmail.com ಗೆ ಕಳುಹಿಸಿಕೊಂಡುವಂತೆ ತಿಳಿಸಿದರು. ವಿಜೇತರ ಹೆಸರನ್ನು ನ.25 ರಂದು ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 9606313023 ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News