ಮಂಡ್ಯ: 'ಆರ್‌ಸಿಇಪಿ' ವಿರುದ್ಧ ಬೀದಿಗಿಳಿದ ಹಾಲು ಉತ್ಪಾದಕರು, ಒಪ್ಪಂದಕ್ಕೆ ಸಹಿ ಹಾಕದಂತೆ ಕೇಂದ್ರಕ್ಕೆ ತಾಕೀತು

Update: 2019-10-31 14:19 GMT

ಮಂಡ್ಯ, ಅ.31: ಕೇಂದ್ರದ ಬಿಜೆಪಿ ಸರಕಾರ 16 ದೇಶಗಳೊಂದಿಗೆ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದಕ್ಕೆ ಸಹಿ ಹಾಕುವುದನ್ನು ವಿರೋಧಿಸಿ ಜಿಲ್ಲಾ ಹಾಲು ಒಕ್ಕೂಟ(ಮನ್‍ಮುಲ್)ದ ನೇತೃತ್ವದಲ್ಲಿ ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಸಿಲ್ವರ್ ಜ್ಯುಬಿಲಿ ಪಾರ್ಕ್‍ನಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಸಾವಿರಾರು ಹಾಲು ಉತ್ಪಾದಕರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರಕಾರಕ್ಕೆ ಮನವಿಪತ್ರ ಸಲ್ಲಿಸಿದರು.

ಆರ್‌ಸಿಇಪಿ ಒಪ್ಪಂದದಿಂದ ನ್ಯೂಝಿಲೆಂಡ್, ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳಿಂದ ಸುಂಕ ರಹಿತವಾಗಿ ಕಡಿಮೆ ಬೆಲೆಗೆ ಹಾಲು ಅಮದಾಗಲಿದ್ದು, ಇದರಿಂದ ದೇಶದ ಹಾಲು ಉತ್ಪಾದಕರಿಗೆ ದೊಡ್ಡ ಹೊಡೆತ ಬೀಳಲಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು. ಒಂದು ವೇಳೆ ಒಪ್ಪಂದಕ್ಕೆ ಸಹಿ ಹಾಕಿ ವಿದೇಶಿ ಹಾಲು ಉತ್ಪನ್ನಗಳು ದೇಶಕ್ಕೆ ಬಂದರೆ ರಾಜ್ಯ ಸೇರಿದಂತೆ ದೇಶದಲ್ಲಿ ಪಶುಸಂಗೋಪನೆಯಿಂದ ಜೀವನ ಸಾಗಿಸುತ್ತಿರುವ ಕೋಟ್ಯಂತರ ಕುಟುಂಬಗಳು ಬೀದಿಗೆ ಬೀಳಲಿವೆ. ಆದ್ದರಿಂದ ಒಪ್ಪಂದಕ್ಕೆ ಸಹಿ ಹಾಕಬಾರದು ಎಂದು ಅವರು ತಾಕೀತು ಮಾಡಿದರು.

ರೇಷ್ಮೆ, ಅಡಿಕೆ, ತೆಂಗು, ಮೆಣಸು ಮುಂತಾದ ವಸ್ತುಗಳೂ ಈ ಒಪ್ಪಂದದ ವ್ಯಾಪ್ತಿಗೆ ಬರಲಿದ್ದು, ಇವುಗಳ ಸುಂಕರಹಿತ ಆಮದಿನಿಂದ ದೇಶೀಯ ಕೃಷಿ ಸಂಪೂರ್ಣ ನಾಶವಾಗಲಿದೆ. ಸಾವಿರಾರು ನೌಕರರೂ ನೌಕರಿ ಕಳೆದುಕೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರ ಯಾವುದೇ ಕಾರಣಕ್ಕೂ ಒಪ್ಪಂದಕ್ಕೆ ಸಹಿಹಾಕದೆ ದೇಶದ ರೈತರ ಹಿತ ಕಾಯಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಇಲ್ಲದಿದ್ದರೆ ಉಗ್ರ ಚಳವಳಿ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಮನ್‍ಮುಲ್ ಅಧ್ಯಕ್ಷ ರಾಮಚಂದ್ರ, ನಿರ್ದೇಶಕರಾದ ಬೋರೇಗೌಡ, ಡಾಲು ರವಿ, ಶಿವಕುಮಾರ್, ಎಚ್.ಟಿ.ಮಂಜು, ರಾಮಚಂದ್ರು, ತಮ್ಮಣ್ಣ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆ ನೇತೃತ್ವ ವಹಿಸಿದ್ದರು. ರ‍್ಯಾಲಿಯಿಂದ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News