×
Ad

ಟಿಪ್ಪು ಪಠ್ಯ ತೆಗೆದು ಹಾಕುವ ನಿರ್ಧಾರ: ಸ್ವಪಕ್ಷದ ವಿರುದ್ಧ ತಿರುಗಿ ಬಿದ್ದ ಬಿಜೆಪಿ ಸಂಸದ ಶ್ರೀನಿವಾಸಪ್ರಸಾದ್

Update: 2019-10-31 21:09 IST

ಮೈಸೂರು,ಅ.31: ಟಿಪ್ಪು ಸುಲ್ತಾನ್ ಬಗೆಗಿನ ಪಠ್ಯವನ್ನು ತೆಗೆದು ಹಾಕುವ ಮೂಲಕ ಬಿಜೆಪಿ ಸರ್ಕಾರ ಕೋಮುವಾದಕ್ಕೆ ಪ್ರಚೋದನೆ ನೀಡಿದಂತಿದೆ ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್ ಸ್ವಪಕ್ಷೀಯ ನಾಯಕರ ನಡೆ ವಿರುದ್ಧ ತಿರುಗಿ ಬಿದ್ದಿದ್ದಾರೆ.

ನಗರದ ತಮ್ಮ ನಿವಾಸದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲೇ ಬಿಜೆಪಿ ಕೋಮುವಾದಿ ಪಕ್ಷ ಎಂಬ ಆರೋಪ ಹೊಂದಿದೆ. ಸರ್ಕಾರದ ನಡೆ ಅದನ್ನು ತೊಡೆದು ಹಾಕುವ ರೀತಿ ಇರಬೇಕಿತ್ತು. ಆದರೆ ಮುಖ್ಯಮಂತ್ರಿಗಳು ಟಿಪ್ಪು ಪಠ್ಯವನ್ನು ತೆಗೆದು ಹಾಕುವ ಮೂಲಕ ಆತುರದ ನಿರ್ಧಾರ ಕೈಗೊಂಡು ಕೋಮುವಾದಕ್ಕೆ ಪ್ರಚೋದನೆ ನೀಡಿದಂತೆ ಇದೆ ಎಂದು ಕಿಡಿಕಾರಿದರು.

ಒಂದು ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ತೀರ್ಮಾನವನ್ನು ಮುಖ್ಯಮಂತ್ರಿ ಕೈಗೊಳ್ಳಬಾರದಿತ್ತು. ಆತುರದ ನಿರ್ಧಾರ ಮಾಡುವ ಮೊದಲು ಎಚ್ಚರಿಕೆಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೆಜ್ಜೆ ಇಡಬೇಕಿತ್ತು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಟಿಪ್ಪು ಜಯಂತಿ ಆಚರಣೆಯ ತೀರ್ಮಾನ ಕೈಗೊಂಡಿತ್ತು. ನಾನು ಆಗ ಕಾಂಗ್ರೆಸ್ ಪಕ್ಷದಲ್ಲಿದ್ದೆ. ಜೊತೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದರಿಂದ ಟಿಪ್ಪು ಪರ ಭಾಷಣವನ್ನು ಮಾಡಿದ್ದೆ. ಆಗಿನ ನನ್ನ ಹೇಳಿಕೆಯನ್ನು ಜನ ನೋಡಿದ್ದಾರೆ. ಈಗ ಟಿಪ್ಪು ಪಠ್ಯವನ್ನು ತೆಗೆದು ಹಾಕಿದರೆ ನಾನು ಜನರಿಗೆ ಏನು ಹೇಳಬೇಕು ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷ ಟಿಪ್ಪು ಒಬ್ಬ ಸ್ವಾತಂತ್ರ್ಯ ಸೇನಾನಿ ಎಂದು ಹೇಳುತ್ತದೆ. ಬಿಜೆಪಿ ಮತಾಂಧ ಎನ್ನುತ್ತದೆ. ಕೆಲವರು ಸ್ವಾತಂತ್ರ್ಯ ಸೇನಾನಿನೂ ಅಲ್ಲ, ಮತಾಂಧನೂ ಅಲ್ಲ, ತನ್ನ ರಾಜ್ಯವನ್ನು ಉಳಿಸಿಕೊಳ್ಳಲು ಹೋರಾಟ ಮಾಡಿದವರು ಎನ್ನುತ್ತಾರೆ. ಇತಿಹಾಸದಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಒಂದು ಸಮುದಾಯದ ಭಾವನೆಯನ್ನು ಕೆಣಕುವ ಕೆಲಸವನ್ನು ಮಾಡಬಾರದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News