ಮೂಡಿಗೆರೆ: ಖಾಸಗಿ ಕಾಲೇಜ್ ನಲ್ಲಿ ಘರ್ಷಣೆ; ಐವರು ವಿದ್ಯಾರ್ಥಿಗಳಿಗೆ ಗಾಯ

Update: 2019-10-31 16:34 GMT

ಮೂಡಿಗೆರೆ, ಅ.31: ಇಲ್ಲಿನ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದ್ದು, ವಿದ್ಯಾರ್ಥಿಯೊಬ್ಬನ ತಲೆಗೆ ರಾಡ್‍ನಿಂದ ಹಲ್ಲೆ ನಡೆಸಿದ ಪರಿಣಾಮ ತೀವ್ರ ಗಾಯವಾಗಿದ್ದು, ಇತರೆ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ವರದಿಯಾಗಿದೆ. 

ಘಟನೆ ಸಂಬಂಧ ಕಾಲೇಜು ಅಡಳಿತ ಮಂಡಳಿ ಪ್ರಕರಣವನ್ನು ಲಘುವಾಗಿ ತೆಗೆದು ಕೊಂಡಿರುವ ಆರೋಪ ಕೇಳಿ ಬಂದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ್ದಾರೆಂದು ತಿಳಿದು ಬಂದಿದೆ.

ಇಲ್ಲಿನ ಬಸ್ ನಿಲ್ದಾಣದ ಕೂಗಳತೆ ದೂರದಲ್ಲಿರುವ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಕಳೆದ ಕೆಲ ದಿನಗಳ ಹಿಂದೆ ಮನಸ್ಥಾಪ ಉಂಟಾಗಿದ್ದು, ಬುಧವಾರ ಕಾಲೇಜಿನ ಒಂದು ಗುಂಪಿನ ಯುವಕರು ಮಾರಕಾಸ್ತ್ರಗಳನ್ನು ಕಾಲೇಜಿನ ಒಳಗೆ ತಂದು ಮತ್ತೊಂದು ಗುಂಪಿನ ವಿದ್ಯಾರ್ಥಿಗಳ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದಾರೆಂದು ತಿಳಿದು ಬಂದಿದೆ. ಈ ವೇಳೆ ಕೆಲವು ವಿದ್ಯಾರ್ಥಿಗಳು ಮಧ್ಯಪ್ರವೇಶಿಸಿ ಜಗಳ ಬಿಡಿಸಿ ಕಳುಹಿಸಿದ್ದು, ಯಾವುದೆ ಹೆಚ್ಚಿನ ಅಪಾಯ ಆಗದಂತೆ ತಡೆದಿದ್ದರು. ಆದರೆ ಗುರುವಾರ ಕಾಲೇಜು ಅರಂಭವಾಗುವ ಸಮಯದಲ್ಲಿ ಕೆಲ ವಿದ್ಯಾರ್ಥಿಗಳು ಮತ್ತೆ ಮಾರಕಾಯುಧಗಳನ್ನು ತಂದು, ಐದಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.

ಈ ಸಂದರ್ಭ ವಿದ್ಯಾರ್ಥಿಯೊಬ್ಬನ ತಲೆಗೆ ರಾಡ್‍ನಿಂದ ಬಲವಾಗಿ ಹೊಡೆದಿದ್ದು, ಪರಿಣಾಮ ಆತ ತೀವ್ರ ರಕ್ತಸ್ರಾವದಿಂದಾಗಿ ಪಟ್ಟಣದ ಸರಕಾರಿ ಅಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆಂದು ತಿಳಿದು ಬಂದಿದೆ. ಘಟನೆ ಹಿನ್ನೆಲೆಯಲ್ಲಿ ಪಟ್ಟಣ ಠಾಣೆಯ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ರಮೇಶ್ ನೇತೃತ್ವದ ಪೋಲಿಸರ ತಂಡ ಅಡಳಿತ ಮಂಡಳಿ, ಶಿಕ್ಷಕರು ಮತ್ತು ಗಲಾಟೆ ಮಾಡಿದ ವಿದ್ಯಾರ್ಥಿಗಳ ಸಭೆ ನಡೆಸಿದೆ. ಘಟನೆ ಸಂಬಂಧ ಯಾರೂ ದೂರು ನೀಡದ ಕಾರಣ ಅನಿವಾರ್ಯವಾಗಿ ಶಾಲಾ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿ ಹಿಂದಿರುಗಿದ್ದಾರೆಂದು ತಿಳಿದು ಬಂದಿದ್ದು, ಮುಂದಿನ ದಿನಗಳಲ್ಲಿ ಗಲಾಟೆ ಮರುಕಳಿಸಿದಲ್ಲಿ ಕಾಲೇಜು ಆಡಳಿತ ಮಂಡಳಿಯ ಪರವಾನಿಗೆ ರದ್ದುಗೊಳಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗೆ ಕೋರಲಾಗುವುದು ಎಂದು ಪೊಲೀಸರು ಈ ವೇಳೆ ಎಚ್ಚರಿಕೆ ನೀಡಿದ್ದಾರೆಂದು ತಿಳಿದುಬಂದಿದೆ.  

'ಕಾಲೇಜು ಆವರಣದಲ್ಲಿ ಗಲಾಟೆ ಹೊಡೆದಾಟಗಳು ನಡೆದರೂ ಸಿಸಿಟಿವಿಗಳ ಮೂಲಕ ಕ್ಯಾಂಪಸ್ ಒಳಗೆ ಮಾರಕಾಸ್ತ್ರ ತಂದವರು ಯಾರು ಎಂದು ಕಂಡು ಹಿಡಿಯುವ ಗೋಜಿಗೂ ಅಡಳಿತ ಮಂಡಳಿ ಹೋಗಿಲ್ಲ. ಪ್ರಾಣ ಹೋಗಿದ್ದಲ್ಲಿ ಹೊಣೆ ಯಾರು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದು, ಘಟನೆ ಸಂಬಂಧ ಯಾವುದೇ ಕ್ರಮ ಕೈಗೊಳ್ಳದೆ ಪ್ರಕರಣವನ್ನೆ ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪಿಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News