ನಾಯಿ ಅಡ್ಡ ಬಂದು ಸ್ಕೂಟರ್ ಪಲ್ಟಿ: ತಾಯಿ ಮೃತ್ಯು, ಮಗನಿಗೆ ಗಾಯ
Update: 2019-10-31 23:10 IST
ಶಿವಮೊಗ್ಗ, ಅ. 31: ರಸ್ತೆಗೆ ಅಡ್ಡಲಾಗಿ ಬಂದ ನಾಯಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ವೇಳೆ, ಸವಾರನ ಚಾಲನೆಯ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ಕೆಳಕ್ಕೆ ಬಿದ್ದ ಪರಿಣಾಮ, ಹಿಂಬದಿ ಕುಳಿತಿದ್ದ ಮಹಿಳೆಯೋರ್ವರು ಮೃತಪಟ್ಟ ಘಟನೆ ನಗರದ ಹೊರವಲಯ ಪುರಲೆ ಗ್ರಾಮದ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ವಿದ್ಯಾನಗರದ ನಿವಾಸಿ ಲಕ್ಷ್ಮಮ್ಮ (35) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ವಾಹನ ಚಲಾಯಿಸುತ್ತಿದ್ದ ಇವರ ಪುತ್ರ ಹೇಮಂತ್ (19) ಎಂಬಾತನಿಗೆ ಸಣ್ಣ ಪ್ರಮಾಣದ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವಘಡದಲ್ಲಿ ಲಕ್ಷ್ಮಮ್ಮರವರ ತಲೆಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿತ್ತು. ತಕ್ಷಣವೇ ಅವರನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರ ಸ್ಥಿತಿ ಚಿಂತಾಜನಕವಾಗಿದ್ದ ಕಾರಣದಿಂದ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಅಸುನೀಗಿದ್ದಾರೆ. ಈ ಸಂಬಂಧ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.