ಪಶ್ಚಿಮ ಘಟ್ಟದಲ್ಲಿ ಮರಳು ಗಣಿಗಾರಿಕೆ: ಕೇಂದ್ರ, ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2019-10-31 18:03 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.31: ಪರಿಸರ ಸೂಕ್ಷ್ಮ ವಲಯ ಎಂದೆ ಗುರುತಿಸಲಾಗಿರುವ ಪಶ್ಚಿಮ ಘಟ್ಟದಲ್ಲಿ ನಡೆಯುತ್ತಿರುವ ಮರಳು ಗಣಿಗಾರಿಕೆ ಹಾಗೂ ವಾಣಿಜ್ಯ ವ್ಯವಹಾರಗಳಿಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿದೆ.

ಈ ಕುರಿತು ವಕೀಲೆ ಗೀತಾ ಮಿಶ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ವಾದಿಸಿದ ವಕೀಲ ಜಿ.ಆರ್.ಮೋಹನ್ ಅವರು, ಮಡಿಕೇರಿ ಸೇರಿ ಇನ್ನಿತರ ಪಶ್ಚಿಮ ಘಟ್ಟಗಳಲ್ಲಿ ಮರಳು ಗಣಿಗಾರಿಕೆ ಹಾಗೂ ವಾಣಿಜ್ಯ ವ್ಯವಹಾರಗಳು ಯಥೇಚ್ಛವಾಗಿ ನಡೆಯುತ್ತಿದ್ದು, ಇದರಿಂದ ಪರಿಸರಕ್ಕೆ ಹಾಗೂ ಪ್ರಾಣಿ ಸಂಕುಲಕ್ಕೆ ಧಕ್ಕೆಯಾಗುತ್ತಿದೆ. ಅಲ್ಲದೆ, ಈ ಪಶ್ಚಿಮ ಘಟ್ಟಗಳಲ್ಲಿ ಯಾವುದೇ ಮರಳು ಗಣಿಗಾರಿಕೆ ನಡೆಸಬಾರದೆಂಬ ಹಲವು ಕೋರ್ಟ್‌ಗಳ ನಿರ್ದೇಶನವೂ ಇದೆ. ಈ ವ್ಯವಹಾರಗಳಿಗೆ ತಡೆ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಕೇಂದ್ರ, ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News