ಬೆಳೆ ನಷ್ಟ ಪರಿಹಾರಕ್ಕಾಗಿ ಲಕ್ಷ್ಮಣ ಸವದಿ ಕಾಲಿಗೆ ಬಿದ್ದು ಕಣ್ಣೀರಿಟ್ಟ ರೈತ

Update: 2019-11-01 12:58 GMT

ಕೊಪ್ಪಳ, ನ. 1: ಬೆಳೆ ನಷ್ಟಕ್ಕೆ ಸರಕಾರದಿಂದ ಕೂಡಲೇ ಪರಿಹಾರ ಕೊಡಿಸುವಂತೆ ಒತ್ತಾಯಿಸಿ ರೈತನೊಬ್ಬ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಕಾಲಿಗೆ ಬಿದ್ದು, ಕಣ್ಣೀರಿಟ್ಟು ಬೇಡಿದ ಪ್ರಸಂಗ ಶುಕ್ರವಾರ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದೆ.

ಶುಕ್ರವಾರ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದ ಬಳಿಕ ರೈತ ಮಂಜುನಾಥ ಪುರದ ಎಂಬವರು ಮನವಿ ಸಲ್ಲಿಸಲು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಳಿ ಬಂದು ಕಾಲಿಗೆ ಬಿದ್ದು, ಕಣ್ಣೀರಿಟ್ಟಿದ್ದಾರೆ ಎಂದು ಗೊತ್ತಾಗಿದೆ.

ಕೊಪ್ಪಳ ಜಿಲ್ಲೆಯ ಹುಲಿಯಾಪುರ ಗ್ರಾಮದಲ್ಲಿ ಜಿಲ್ಲಾಡಳಿತ ಕೆರೆ ನಿರ್ಮಾಣಕ್ಕೆ ರೈತರ ಭೂಮಿಯನ್ನು 1985ರಲ್ಲೆ ಸ್ವಾಧೀನ ಮಾಡಿಕೊಂಡಿದೆ. ಭೂ ಸ್ವಾಧೀನ ಪರಿಹಾರವನ್ನೂ ನೀಡಿದೆ. ಆದರೆ, ಕೆರೆಯ ನೀರಿನಿಂದ ಬೆಳೆ ನಷ್ಟವಾಗಿದ್ದು, ಆಗಿನಿಂದಲೂ ಮನವಿ ಮಾಡುತ್ತಿದ್ದರೂ, ಈ ಬಗ್ಗೆ ಸರಕಾರ ಸ್ಪಂದಿಸಿಲ್ಲ. ಒಟ್ಟು 45 ರೈತರ ಬೆಳೆ ನಷ್ಟ ಪರಿಹಾರ ಕೊಡಬೇಕಿದೆ ಎಂದು ರೈತ ಮಂಜುನಾಥ, ಡಿಸಿಎಂ ಕಾಲಿಗೆ ಬಿದ್ದು ಕಣ್ಣೀರಿಟ್ಟರು.

ಧಾರವಾಡ ಹೈಕೋರ್ಟ್ ಕೂಡ ರೈತರ ಬೆಳೆ ನಷ್ಟ ಪರಿಹಾರ ನೀಡಬೇಕೆಂದು ಆದೇಶ ಹೊರಡಿಸಿದೆ. ಆದರೆ, ಜಿಲ್ಲಾಡಳಿತ ರೈತರ ಬೆಳೆ ನಷ್ಟ ಪರಿಹಾರ ಕೊಡುತ್ತಿಲ್ಲ. ಐವತ್ತೈದು ವರ್ಷಗಳಿಂದ ರೈತರ ಹೋರಾಟ ಮಾಡುತ್ತಿದ್ದು, ಕೂಡಲೇ ಸರಕಾರ ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಮಧ್ಯಪ್ರವೇಶಿಸಿ ಪೊಲೀಸರು ರೈತ ಮಂಜುನಾಥ ಅವರನ್ನು ಕರೆದೊಯ್ಯಲು ಪ್ರಯತ್ನಿಸಿದರು. ಈ ವೇಳೆ ರೈತನಿಗೆ ಸಮಾಧಾನಪಡಿಸಿದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ‘ನಿಮಗೆ ಪರಿಹಾರ ಬೇಕೋ ಪ್ರಚಾರ ಬೇಕೋ’ ಎಂದು ಪ್ರಶ್ನಿಸಿದ್ದಲ್ಲದೆ ಕೂಡಲೇ ಪರಿಹಾರ ಕೊಡಿಸುವ ಪ್ರಯತ್ನ ಮಾಡುವೆ ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News