×
Ad

ಕನ್ನಡ ರಾಜ್ಯೋತ್ಸವಕ್ಕೆ ಪ್ರಧಾನಿ ಸೇರಿ ಗಣ್ಯರ ಶುಭಾಶಯ

Update: 2019-11-01 18:18 IST

ಬೆಂಗಳೂರು, ನ. 1: ‘ರಾಷ್ಟ್ರದ ಬೆಳವಣಿಗೆಗೆ ಕರ್ನಾಟಕ ನೀಡಿದ ಅತ್ಯುನ್ನತ ಕೊಡುಗೆಯನ್ನು ಆಚರಣೆ ಮಾಡುವ ದಿವಸವೇ ಕರ್ನಾಟಕ ರಾಜ್ಯೋತ್ಸವ. ಕನ್ನಡಿಗರ ವಿಶಾಲ ಹೃದಯವಂತಿಕೆ ಹಾಗೂ ಕನ್ನಡ ನಾಡಿನ ಸೌಂದರ್ಯ ಹೆಸರುವಾಸಿಯಾದದ್ದು. ಬರುವ ದಿನಗಳಲ್ಲಿ ಕರ್ನಾಟಕದ ಅಭಿವೃದ್ಧಿಗಾಗಿ ಪ್ರಾರ್ಥಿಸುತ್ತೇನೆ’ ಎಂದು ಪ್ರಧಾನಿ ಮೋದಿ ಟ್ವಿಟ್ಟರ್ ಮೂಲಕ ಶುಭ ಕೋರಿದ್ದಾರೆ.

‘ನಾಡಿನ ಭವ್ಯ ಪರಂಪರೆ, ಇತಿಹಾಸ ಹಾಗೂ ಪರಂಪರೆಯನ್ನು ಉಳಿಸಿ-ಬೆಳೆಸುವ ಜೊತೆಗೆ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿರುವ ಕನ್ನಡ ಸೋದರ-ಸೋದರಿಯರ ಬದುಕು ಕಟ್ಟಿಕೊಡಲು ತನು, ಮನ, ಧನದಿಂದ ನೆರವಾಗೊಣ. ಕನ್ನಡಾಂಬೆ ಭುವನೇಶ್ವರಿಯ ಅನುಗ್ರಹದಿಂದ ಸ್ವಚ್ಛ, ಸ್ವಸ್ಥ ಹಾಗೂ ಸಮೃದ್ಧ ಕನ್ನಡ ನಾಡನ್ನು ನಿರ್ಮಿಸೋಣ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಕಟ್ಟುವ ಕಾಯಕದಲ್ಲಿ ತೊಡಗೋಣ: ‘ಪ್ರೀತಿಯ ಕನ್ನಡ ಬಂಧುಗಳಿಗೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡಕ್ಕಾಗಿ ದುಡಿದ, ಮಡಿದ ಮಹನೀಯರನ್ನೆಲ್ಲಾ ಗೌರವದಿಂದ ನೆನೆಯೋಣ. ಕನ್ನಡವನ್ನು ಕಟ್ಟುವ, ಬೆಳೆಸುವ ಮತ್ತು ಉಳಿಸುವ ಕಾಯಕದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುತ್ತೇವೆ ಎಂದು ಪಣತೊಡೋಣ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯೋತ್ಸವ ಶುಭಾಶಯ ಕೋರಿದ್ದಾರೆ.

‘ಭಾಷೆ ಆಧಾರದ ಮೇಲೆ ನಮ್ಮದೊಂದು ನಾಡು ಕಟ್ಟಿಕೊಂಡ ದಿನವಿದು. ಕನ್ನಡಿಗರನ್ನು ಬೆಸೆದ ಕನ್ನಡ ಕೇವಲ ಭಾಷೆಯಲ್ಲ, ನಮ್ಮ ಅಸ್ಮಿತೆ. ನಮ್ಮ ಹೆಗ್ಗುರುತು. ನಾಡಿನ ರಚನೆಗೆ ಶ್ರಮಿಸಿದ ಎಲ್ಲರನ್ನೂ ನೆನೆಯುತ್ತೇನೆ. ಕನ್ನಡ ಹೋರಾಟಗಾರರನ್ನು ಸ್ಮರಿಸುತ್ತೇನೆ’ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಶುಭ ಹಾರೈಸಿದ್ದಾರೆ.

‘ನಾಡಧ್ವಜ ಕನ್ನಡದ ಇತಿಹಾಸ, ಪರಂಪರೆ, ಸಂಸ್ಕೃತಿಯ ಪ್ರತೀಕ. ಇಂಥ ನಾಡಧ್ವಜವನ್ನು ಬಿಜೆಪಿ ಅಗೌರವಿಸುತ್ತಿರುವುದೇಕೇ? ಐವತ್ತು ವರ್ಷ ರಾಷ್ಟ್ರಧ್ವಜವನ್ನೇ ನಿರಾಕರಿಸಿದ್ದ ಆರೆಸೆಸ್ಸ್, ಬಿಜೆಪಿ, ಈಗ ಕನ್ನಡ ಧ್ವಜಕ್ಕೆ ಅಪಮಾನ ಮಾಡುತ್ತಿದೆ. ಕನ್ನಡ ರಾಜ್ಯೋತ್ಸವದಂದು ನಾಡಧ್ವಜ ಹಾರಿಸದೆ ಏಳು ಕೋಟಿ ಕನ್ನಡಿಗರ ಅಸ್ಮಿತೆಗೆ ಧಕ್ಕೆ ತಂದದ್ದು ಸರಿಯೇ’

-ಕಾಂಗ್ರೆಸ್ ಟ್ವೀಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News