ಕನ್ನಡ ಧ್ವಜಕ್ಕೆ ಅನುಮತಿ ನೀಡದ ಸರಕಾರ: ಆದೇಶಕ್ಕೆ ನೊಂದು ರಾಜ್ಯೋತ್ಸವ ಪ್ರಶಸ್ತಿ ನಿರಾಕರಿಸಿದ ವಿದ್ಯಾರ್ಥಿ

Update: 2019-11-01 14:06 GMT

ಚಿಕ್ಕಮಗಳೂರು, ನ.1: ಕನ್ನಡ ರಾಜ್ಯೋತ್ಸವದ ದಿನದಂದು ರಾಜ್ಯ ಸರಕಾರ ಕನ್ನಡ ಬಾವುಟಗಳನ್ನು ಹಾರಿಸಲು ಅನುಮತಿ ನೀಡದ ಕಾರಣಕ್ಕೆ ಕಾಲೇಜು ಯುವಕನೊಬ್ಬ ತನಗೆ ತಾಲೂಕು ಆಡಳಿತ ನೀಡಿದ್ದ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ ಘಟನೆ ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಶುಕ್ರವಾರ ವರದಿಯಾಗಿದೆ.

ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಶೃಂಗೇರಿಯ ತಾಲೂಕು ಆಡಳಿತ ಕಳೆದ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ 125 ಅಂಕಕ್ಕೆ 125 ಅಂಕ ಪಡೆದು ಸಾಧನೆ ಮಾಡಿದ್ದ ವಿದ್ಯಾರ್ಥಿ ಸಂಕೀರ್ತ ಎಂಬಾತನನ್ನು ಈ ಬಾರಿಯ ತಾಲೂಕು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಅದರಂತೆ ತಾಲೂಕು ಆಡಳಿತ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸಂಕೀರ್ತ ಅವರಿಗೆ ತಾಲೂಕು ಆಡಳಿತದ ವತಿಯಿಂದ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸಮಾರಂಭದಲ್ಲಿ ವಿದ್ಯಾರ್ಥಿಗೆ ಸನ್ಮಾನ ಮಾಡುವ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜನಕರು ವಿದ್ಯಾರ್ಥಿಯ ಹೆಸರು ಕೂಗಿ ಕರೆದಾಗ, ವಿದ್ಯಾರ್ಥಿ ಹಾಗೂ ಆತನ ತಂದೆ ಎದ್ದು ನಿಂತು, ರಾಜ್ಯಾದ್ಯಂತ ಕನ್ನಡದ ಹಬ್ಬ ನಡೆಯುತ್ತಿರುವ ಸಂದರ್ಭದಲ್ಲಿ ಕನ್ನಡ ಬಾವುಟ ಹಾರಿಸುವುದನ್ನು ರಾಜ್ಯ ಸರಕಾರ ನಿಷೇಧಿಸಿ ಆದೇಶ ಹೊರಡಿಸಿದೆ. ಇದರಿಂದ ನಮಗೆ ಅತೀವ ನೋವುಂಟು ಮಾಡಿದೆ. ಕನ್ನಡಿಗರ ಭಾವನೆಗಳಿಗೆ, ಕನ್ನಡ ನಾಡಿಗೆ ಅವಮಾನ ಮಾಡಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ನಿರಾಕರಿಸುತ್ತಿದ್ದೇವೆ ಎಂದು ಸಭೆಯಲ್ಲಿ ಬಹಿರಂಗವಾಗಿ ಹೇಳುವ ಮೂಲಕ ತಾಲೂಕು ಆಡಳಿತ ಹಾಗೂ ರಾಜ್ಯ ಸರಕಾರಕ್ಕೆ ಛೀಮಾರಿ ಹಾಕಿದ್ದಾರೆ.

ಈ ಘಟನೆ ಸಂಬಂಧ ವಿದ್ಯಾರ್ಥಿ ಸಂಕೀರ್ತ ಅವರ ತಂದೆ ರಾಜ್ಯೋತ್ಸವ ಸಮಾರಂಭದ ಸಭೆಯಲ್ಲಿ ತಾಲೂಕು ಆಡಳಿತವನ್ನುದ್ದೇಶಿಸಿದ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ.

"ಎಸೆಸೆಲ್ಸಿ ಪರೀಕ್ಷೆಯಲ್ಲಿ ನನ್ನ ಮಗ 125ಕ್ಕೆ 125 ಅಂಕ ಪಡೆದು ಸಾಧನೆ ಮಾಡಿದ್ದಾನೆ. ಈ ಸಾಧನೆ ಮಾಡಲು ಕಾರಣರಾದ ಶಾಲೆಯ ಶಿಕ್ಷಕರಿಗೆ, ವಿದ್ಯಾ ಸಂಸ್ಥೆಗೆ ಧನ್ಯವಾದ ಹೇಳುತ್ತೇನೆ. ಆದರೆ ತಾಲೂಕು ಆಡಳಿತ ಮಗನಿಗೆ ನೀಡಿದ ರಾಜ್ಯೋತ್ಸವ ಪ್ರಶಸ್ತಿಯನ್ನು ನನ್ನ ಮಗನಾಗಲೀ, ಕುಟುಂಬದವರಾಗಲೀ ಸ್ವೀಕರಿಸುವುದಿಲ್ಲ. ಏಕೆಂದರೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕನ್ನಡ ಬಾವುಟ ಹಾರಿಸುವುದನ್ನು ಸರಕಾರ ನಿಷೇಧಿಸಿದೆ. ಇದರಿಂದ ನೋವಾಗಿರುವ ಕಾರಣದಿಂದ ಪ್ರಶಸ್ತಿ ಸ್ವೀಕರಿಸುವುದಿಲ್ಲ" ಎಂದು ವಿದ್ಯಾರ್ಥಿಯ ತಂದೆ ರಾಜ್ಯೋತ್ಸವ ಸಮಾರಂಭದ ಸಭೆಯಲ್ಲಿ ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News