ಸಚಿವ ಜಗದೀಶ್ ಶೆಟ್ಟರ್ ವಿದೇಶ ಪ್ರವಾಸ ನಿರ್ಧಾರಕ್ಕೆ ವ್ಯಾಪಕ ಟೀಕೆ

Update: 2019-11-01 16:20 GMT

ಬೆಂಗಳೂರು, ನ.1: ಮುಂದಿನ ಸಾಲಿನ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ(ಇನ್ವೆಸ್ಟ್ ಕರ್ನಾಟಕ)ಕ್ಕೆ ಉದ್ಯಮಿಗಳನ್ನು ಆಕರ್ಷಿಸಲು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹಾಗೂ ಇಲಾಖೆಯ ಅಧಿಕಾರಿಗಳು ಕುಟುಂಬ ಸಮೇತ ನ.5ರಿಂದ 10 ದಿನಗಳ ಕಾಲ ಚೀನಾ ಹಾಗೂ ಲಂಡನ್‌ಗೆ ಪ್ರವಾಸ ಕೈಗೊಳ್ಳಲು ತೆರಳುತ್ತಿರುವುದು ಸಾಕಷ್ಟು ಟೀಕೆಗೆ ಗುರಿಯಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಹಾಗೂ ಪ್ರವಾಹದಿಂದಾಗಿ ಸಂತ್ರಸ್ತರು ಬದುಕು ಕಟ್ಟಿಕೊಳ್ಳಲು ಪರದಾಡುತ್ತಿರುವ ಸಂದರ್ಭದಲ್ಲಿ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಜಗದೀಶ್ ಶೆಟ್ಟರ್ ಹಾಗೂ ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ತಮ್ಮ ಕುಟುಂಬ ಸಮೇತ 10 ದಿನಗಳ ಕಾಲ ವಿದೇಶ ಪ್ರವಾಸ ಕೈಗೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ರಾಜ್ಯಕ್ಕೆ ಬಂಡವಾಳವನ್ನು ಆಕರ್ಷಿಸಲು ಹೊರಟಿರುವುದು ಒಂದೆಡೆಯಾದರೆ, ಇದೇ ವಿಚಾರ ಮುಂದಿನ ದಿನಗಳಲ್ಲಿ ವಿರೋಧ ಪಕ್ಷದ ಮುಖಂಡರು ಸರಕಾರದ ವಿರುದ್ಧ ವಾಗ್ದಾಳಿ ನಡೆಸಲು ಅವಕಾಶ ಮಾಡಿಕೊಡಬಹುದು ಎಂಬ ಆತಂಕ ಜಗದೀಶ್ ಶೆಟ್ಟರ್‌ಗೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೇವಲ ಅಧಿಕಾರಿಗಳನ್ನು ಮಾತ್ರ ವಿದೇಶಕ್ಕೆ ಕಳುಹಿಸಿಕೊಟ್ಟು ತಾವು ಇಲ್ಲಿಯೇ ಉಳಿದುಕೊಳ್ಳಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಚೀನಾ ದೇಶದ ಉದ್ಯಮಿಗಳ ನಿಯೋಗದ ಆಹ್ವಾನದ ಮೇರೆಗೆ ಜಗದೀಶ್ ಶೆಟ್ಟರ್ ಚೀನಾ ಪ್ರವಾಸ ಕೈಗೊಳ್ಳಲು ಸಿದ್ಧತೆ ನಡೆಸಿದ್ದರು. ಚೀನಾ ಪ್ರವಾಸದ ಬಳಿಕ ನ.13ರಂದು ಲಂಡನ್‌ನಲ್ಲಿ ನಡೆಯಲಿರುವ 19ನೇ ಲಂಡನ್ ಗ್ಲೋಬಲ್ ಕನ್ವೆನ್ಷನ್ ಸಮಾರಂಭದಲ್ಲಿ ಪಾಲ್ಗೊಂಡು, ನ.16ರಂದು ರಾಜ್ಯಕ್ಕೆ ಹಿಂದಿರುಗಲು ನಿರ್ಧರಿಸಿದ್ದರು.

ಸಮರ್ಥನೆ: ಇದು ಖಾಸಗಿ ಪ್ರವಾಸ ಕಾರ್ಯಕ್ರಮವಲ್ಲ, ಸರಕಾರಿ ಕಾರ್ಯಕ್ರಮ. ಮುಂದಿನ ವರ್ಷ ನಡೆಯಲಿರುವ ಹೂಡಿಕೆದಾರರ ಸಮಾವೇಶಕ್ಕೆ ರಾಜ್ಯಕ್ಕೆ ಬಂಡವಾಳ ಆಕರ್ಷಿಸಲು ಪ್ರವಾಸ ಕೈಗೊಳ್ಳಲಾಗುತ್ತಿದೆ, ಇದರಲ್ಲಿ ತಪ್ಪೇನಿಲ್ಲ ಎಂದು ತಮ್ಮ ವಿದೇಶ ಪ್ರವಾಸವನ್ನು ಜಗದೀಶ್ ಶೆಟ್ಟರ್ ಸಮರ್ಥಿಸಿಕೊಂಡಿದ್ದಾರೆ.

ಚೀನಾ ದೇಶದ ಉದ್ಯಮಿಗಳ ಆಹ್ವಾನದ ಹಿನ್ನೆಲೆಯಲ್ಲಿ ಈ ಪ್ರವಾಸ ಕಾರ್ಯಕ್ರಮ ಸಿದ್ಧಪಡಿಸಲಾಗಿದೆ. ನೆರೆ ಸಂತ್ರಸ್ತರಿಗೆ ಅಗತ್ಯ ನೆರವು ಕಲ್ಪಿಸುವಲ್ಲಿ ರಾಜ್ಯ ಸರಕಾರ ಸಮರ್ಥವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News