‘ಅಭಿವೃದ್ಧಿಯೇ ಆಡಳಿತ ಮಂತ್ರ’ ಸರಕಾರದ ಧ್ಯೇಯವಾಕ್ಯ: ಸಚಿವ ಜಗದೀಶ್ ಶೆಟ್ಟರ್

Update: 2019-11-01 16:29 GMT

ಬೆಳಗಾವಿ, ನ.1: ರಾಜ್ಯ ಸರಕಾರವು ಆಡಳಿತದಲ್ಲಿ ಜನಪರ ಕಾರ್ಯಕ್ರಮಗಳನ್ನು ರೂಪಿಸುವುದರ ಜತೆಗೆ ಪ್ರವಾಹ ಸಂತ್ರಸ್ತರಿಗೆ ಬದುಕು ಕಟ್ಟಿಕೊಡುವ ದೃಢ ಸಂಕಲ್ಪ ಮಾಡಿದೆ. ನೂರು ದಿನಗಳನ್ನು ಪೂರೈಸುತ್ತಿರುವ ನಮ್ಮ ಸರಕಾರವು ‘ಅಭಿವೃದ್ಧಿಯೇ ಆಡಳಿತ ಮಂತ್ರ’ ಎಂಬ ಧ್ಯೇಯವಾಕ್ಯದೊಂದಿಗೆ ಮುನ್ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಶುಕ್ರವಾರ ಜಿಲ್ಲಾಡಳಿತದ ವತಿಯಿಂದ ನಗರದ ಸಿಪಿಎಡ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಮಾರಂಭದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ರಾಜ್ಯೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬೆಳೆಹಾನಿಯಿಂದ ರೈತರಿಗಾಗಿರುವ ತೊಂದರೆಯನ್ನು ಅರಿತುಕೊಂಡಿರುವ ಮುಖ್ಯಮಂತ್ರಿ, ಹಾನಿಗೊಳಗಾಗಿರುವ ಬೆಳೆಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ನೀಡಲಾಗುತ್ತಿರುವ ಪರಿಹಾರದ ಜತೆಗೆ ಪ್ರತಿ ಹೆಕ್ಟೇರ್‌ಗೆ ಹತ್ತು ಸಾವಿರ ರೂ.ಹೆಚ್ಚುವರಿ ಪರಿಹಾರವನ್ನು ಘೋಷಿಸಿದ್ದಾರೆ ಎಂದು ಅವರು ಹೇಳಿದರು.

ಪ್ರವಾಹ ಹಾಗೂ ಮಳೆಯಿಂದ ನೇಕಾರ ಕುಟುಂಬಗಳು ತೀವ್ರ ಸಂಕಷ್ಟಕ್ಕೀಡಾಗಿರುವುದನ್ನು ಮನಗಂಡಿರುವ ರಾಜ್ಯ ಸರಕಾರ, ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ನಿಗದಿಪಡಿಸಲಾಗಿದ್ದ 4100 ರೂ.ಪರಿಹಾರದ ಮೊತ್ತವನ್ನು 25 ಸಾವಿರ ರೂ.ಗಳಿಗೆ ಹೆಚ್ಚಿಸಿದೆ ಎಂದು ಅವರು ತಿಳಿಸಿದರು.

ಬೆಳಗಾವಿ ಜಿಲ್ಲೆಯಲ್ಲಿ ಹರಿಯುತ್ತಿರುವ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ, ದೂಧಗಂಗಾ ಮತ್ತು ವೇದಗಂಗಾ ನದಿಗಳ ಮಹಾಪೂರದಿಂದಾಗಿ ಲಕ್ಷಾಂತರ ಕುಟುಂಬಗಳು ಮನೆಮಠಗಳನ್ನು ತೊರೆಯಬೇಕಾಯಿತು. ಪ್ರವಾಹದಿಂದ ತತ್ತರಿಸಿದ್ದ ಜಿಲ್ಲೆಯ 14 ತಾಲೂಕುಗಳ 872 ಗ್ರಾಮಗಳ 4.15 ಲಕ್ಷ ಜನರನ್ನು ಮತ್ತು 1.10 ಲಕ್ಷ ಜಾನುವಾರುಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಪ್ರವಾಹ ಹಾಗೂ ಧಾರಾಕಾರ ಮಳೆಯಿಂದಾಗಿ 37 ಜನ ಮೃತಪಟ್ಟಿದ್ದು, ಈ ಪೈಕಿ 32 ಜನರ ವಾರಸುದಾರರಿಗೆ ತಲಾ 5 ಲಕ್ಷ ರೂ.ಗಳಂತೆ 1.75 ಕೋಟಿ ರೂ.ಪರಿಹಾರ ನೀಡಲಾಗಿದೆ. ಅದೇ ರೀತಿ ಜೀವ ಕಳೆದುಕೊಂಡ 761 ಜಾನುವಾರುಗಳ ಮಾಲಕರಿಗೆ 71 ಲಕ್ಷ ರೂ.ಪರಿಹಾರ ನೀಡಲಾಗಿದೆ ಎಂದು ಅವರು ತಿಳಿಸಿದರು.

ಮನೆಗಳನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ರಾಜ್ಯ ಸರಕಾರವು ಪ್ರತಿ ಮನೆ ನಿರ್ಮಾಣಕ್ಕೆ 5 ಲಕ್ಷ ರೂ.ಪರಿಹಾರ ನೀಡುತ್ತಿದೆ. ‘ಎ’ ಮತ್ತು ‘ಬಿ’ ಕೆಟಗರಿ ಮನೆಗಳಿಗೆ 5 ಲಕ್ಷ ರೂ., ‘ಸಿ’ ಕೆಟಗರಿ ಮನೆಗಳಿಗೆ 50 ಸಾವಿರ ರೂ.ಪರಿಹಾರ ನೀಡುತ್ತಿದೆ. ಮುಂದಿನ 5 ವರ್ಷಗಳಲ್ಲಿ ರಾಜ್ಯವನ್ನು ಗುಡಿಸಲು ವಾಸಿಗಳ ರಹಿತ ರಾಜ್ಯವನ್ನಾಗಿಸುವುದು ಸರಕಾರದ ಉದ್ದೇಶವಾಗಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಕಾರ್ಯಕ್ರಮದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ವಿಧಾನಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ್ ಕೋರೆ, ಜಿ.ಪಂ.ಅಧ್ಯಕ್ಷೆ ಆಶಾ ಐಹೊಳೆ, ಶಾಸಕರಾದ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News