ಸರಕಾರಿ ಕಚೇರಿಗಳ ಮೇಲೆ ಕನ್ನಡ ಧ್ವಜ ಹಾರಿಸಿದ ಉದಾಹರಣೆಗಳಿಲ್ಲ: ಸಚಿವ ಸಿ.ಟಿ.ರವಿ

Update: 2019-11-01 17:22 GMT

ಚಿಕ್ಕಮಗಳೂರು, ನ.1: ಬಹು ಹಿಂದಿನಿಂದಲೂ ಸರಕಾರಿ ಕಚೇರಿಗಳ ಮೇಲೆ ಕನ್ನಡ ಧ್ವಜವನ್ನು ಹಾರಿಸಿದ ಉದಾಹರಣೆಗಳಿಲ್ಲ. ಇದಕ್ಕೆ ಧ್ವಜ ಸಂಹಿತೆಯಲ್ಲೂ ಅವಕಾಶವಿಲ್ಲ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ರಚಿಸಿರುವ ಸಂವಿಧಾನದ ಧ್ವಜ ಸಂಹಿತೆಯಲ್ಲಿ ದೇಶಕ್ಕೆ ಒಂದೇ ಧ್ವಜ ಇರುವುದನ್ನು ಉಲ್ಲೇಖಿಸಿದ್ದಾರೆ ಎಂದರು. 

ರಾಜ್ಯದ ವಿವಿಧೆಡೆ ಇರುವ ಪ್ರಾಚೀನ ಸ್ಮಾರಕಗಳ ರಕ್ಷಣೆಗಾಗಿ ಸಂರಕ್ಷಣಾ ಎಂಬ ನೂತನ ಯೋಜನೆಯನ್ನು ಜಾರಿಗೆ ತರುವ ಚಿಂತನೆ ನಡೆಸಲಾಗಿದೆ. ಸಾವಿರಾರು ಪ್ರಾಚೀನ ಸ್ಮಾರಕಗಳು ಮುಜರಾಯಿ ವ್ಯಾಪ್ತಿಯಲ್ಲಿದ್ದು, ಅವುಗಳನ್ನು ಪ್ರಾಚ್ಯವಸ್ತು ಇಲಾಖೆಯಡಿಯಲ್ಲಿ ಅಭಿವೃದ್ದಿಗೊಳಿಸಿ ಸಂರಕ್ಷಿಸುವ ಯೋಜನೆ ಇದಾಗಿದೆ. ರಾಜಕೀಯ ಅಹಿತಕರ ಬೆಳವಣಿಗೆಗಳು ಸಂಭವಿಸದಿದ್ದರೆ ಫೆಬ್ರವರಿ ವೇಳೆಗೆ ನೂತನ ಪ್ರವಾಸೋದ್ಯಮ ನೀತಿ ಜಾರಿಗೆ ತರಲಾಗುವುದು ಎಂದರು.

ಪ್ರವಾಸೋದ್ಯಮ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಸುಮಾರು 20 ಜಿಲ್ಲೆಗಳಲ್ಲಿ ಈಗಾಗಲೇ ಪ್ರವಾಸ ಪೂರ್ಣಗೊಂಡಿದ್ದೇನೆ. ಇನ್ನೂ 10 ಜಿಲ್ಲೆಗಳಲ್ಲಿ ಪ್ರವಾಸಕೈಗೊಳ್ಳಬೇಕಿದೆ. ನಂತರ ಸಮಗ್ರ ಪರಿಶೀಲನೆ ನಡೆಸಿ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳು, ಚಿಂತಕರು, ಪರಿಸರ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ನೂತನ ಪ್ರವಾಸೋದ್ಯಮ ನೀತಿಯನ್ನು ಫೆಬ್ರವರಿಯೊಳಗೆ ಜಾರಿಗೊಳಿಸಲಾಗುವುದು ಎಂದು ಹೇಳಿದ ಅವರು, ಸೂಕ್ಷ್ಮ ಪ್ರದೇಶಗಳಲ್ಲಿ ಪರಿಸರಕ್ಕೆ ಧಕ್ಕೆಯಾಗದಂತೆ ಪ್ರವಾಸೋದ್ಯಮ ನೀತಿ ರೂಪಿಸುವ ಸವಾಲು ಸರಕಾರದ ಮುಂದಿದೆ ಎಂದು ಹೇಳಿದರು.

ಚಿಕ್ಕಮಗಳೂರು ನಗರ ಸೇರಿದಂತೆ ಸೇರಿದಂತೆ ರಾಜ್ಯಾದ್ಯಂತ ವ್ಯವಸ್ಥಿತ ನಗರಗಳ ನಿರ್ಮಾಣಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಬೇಕಾದ ನಗರಸಭೆ ಮತ್ತು ನಗರಾಭಿವೃದ್ದಿ ಪ್ರಾಧಿಕಾರ ಸಂಸ್ಥೆಗಳು ನಿರ್ಲಕ್ಷ್ಯಧೋರಣೆಯಿಂದ ಅವ್ಯವಸ್ಥಿತ ನಗರಗಳ ನಿರ್ಮಾಣವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಿಟಿ ರವಿ, ಭೂಕಬಳಿಕೆ ಮತ್ತು ಅಕ್ರಮ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಿದ ಕಂದಾಯಾಧಿಕಾರಿಗಳು ನಗರಾಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳು, ನಗರಸಭೆಯ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸುವುದಾಗಿ ಹೇಳಿದರು.

ನಾಡಹಬ್ಬಗಳು ಜನರ ಹಬ್ಬವಾಗಬೇಕು, ಹಬ್ಬಗಳ ಬಗ್ಗೆ ಭಾವನಾತ್ಮಕ ಸ್ಪಂದನೆ ಅಗತ್ಯ ಎಂದು ಹೇಳಿದ ಅವರು, ದೇಹ ಮತ್ತು ಮನಸ್ಸುಗಳನ್ನು ನಾಡಹಬ್ಬಗಳ ಬಗ್ಗೆ ಆಸಕ್ತಿ ಮೂಡುವಂತೆ ಆಕರ್ಷಣೀಯವನ್ನಾಗಿಸುವ ಅಗತ್ಯವಿದೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬಗಾದಿ ಗೌತಮ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶ್ವತಿ, ಜಿ.ಪಂ. ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ತಾ.ಪಂ. ಅಧ್ಯಕ್ಷ ನೆಟ್ಟೇಕೆರೆಹಳ್ಳಿ ಜಯಣ್ಣ, ಪೊಲೀಸ್ ವರಿಷ್ಠಾಧಿಕಾರಿ ಹರೀಶ್‍ಪಾಂಡೆ, ಮುಖಂಡರಾದ ಹೆಚ್.ಡಿ ತಮ್ಮಯ್ಯ, ವರಸಿದ್ದಿವೇಣು ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News