ಕನ್ನಡ ಧ್ವಜ ಹಾರಿಸದಕ್ಕೆ ಆಕ್ರೋಶ: ಸಚಿವ ಈಶ್ವರಪ್ಪಗೆ ಮುತ್ತಿಗೆ ಹಾಕಲೆತ್ನಿಸಿದ ಕರವೇ ಕಾರ್ಯಕರ್ತರು

Update: 2019-11-01 17:25 GMT

ಶಿವಮೊಗ್ಗ, ನ. 1: ಇಲ್ಲಿನ ಡಿಎಆರ್ ಮೈದಾನದಲ್ಲಿ ಆಯೋಜಿಸಿದ್ದ ಕನ್ನಡ ರಾಜೋತ್ಸವ ಸಮಾರಂಭದಲ್ಲಿ ಕನ್ನಡ ಧ್ವಜ ಹಾರಿಸದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಸಚಿವ ಕೆ.ಎಸ್.ಈಶ್ವರಪ್ಪಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಘೇರಾವ್ ಮಾಡಲು ಮುಂದಾದ ಘಟನೆ ಶುಕ್ರವಾರ ನಡೆಯಿತು. 

ಸಮಾರಂಭದಲ್ಲಿ ಈಶ್ವರಪ್ಪರವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಭಾಷಣ ಮಾಡಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ಡಿ.ಎ.ಆರ್. ಸಭಾಂಗಣದಲ್ಲಿ ಆಯೋಜಿತವಾಗಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಜಿಲ್ಲಾಧಿಕಾರಿ, ಎಸ್.ಪಿ. ಸೇರಿದಂತೆ ಹಿರಿಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಈ ವೇಳೆ ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ಸಚಿವರಿಗೆ ಮನವಿ ಕೊಡುವ ನೆಪದನಲ್ಲಿ ಆಗಮಿಸಿದ ಕಾರ್ಯಕರ್ತರು, ಏಕಾಏಕಿ ಸಚಿವರ ವಿರುದ್ಧ ದಿಕ್ಕಾರದ ಘೋಷಣೆ ಕೂಗಲಾರಂಭಿಸಿದರು. ಕನ್ನಡ ಧ್ವಜ ಹಾರಿಸದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಲಾರಂಭಿಸಿದರು. 

ತಕ್ಷಣವೇ ಎಸ್.ಪಿ. ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಕಾರ್ಯಕರ್ತರನ್ನು ಸಮಾಧಾನಗೊಳಿಸಲು ಮುಂದಾದರು. ಆದರೆ ಕಾರ್ಯಕರ್ತರು ಸರ್ಕಾರ, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುವುದನ್ನು ಮುಂದುವರಿಸಿದರು. ನಂತರ ಪೊಲೀಸರು ಕಾರ್ಯಕರ್ತರನ್ನು ಸಭಾಂಗಣದಿಂದ ಬಲವಂತವಾಗಿ ಹೊರತಂದು, ವಶಕ್ಕೆ ಪಡೆದು ಕರೆದೊಯ್ದರು. 

ಅಸಮಾಧಾನ: 'ಕನ್ನಡ ರಾಜೋತ್ಸವ ವೇಳೆ ಕನ್ನಡ ಧ್ವಜ ಹಾರಿಸಬೇಕಾಗಿತ್ತು. ಆದರೆ ಕನ್ನಡ ಧ್ವಜ ಹಾರಿಸದೆ ನಿರ್ಲಕ್ಷಿಸಲಾಗಿದೆ. ಇದು ಅಕ್ಷಮ್ಯ ಅಪರಾಧವಾಗಿದೆ. ಈ ಮೂಲಕ ನಾಡಿಗೆ ಅವಮಾನ ಮಾಡಲಾಗಿದೆ' ಎಂದು ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News