ಪ್ರತ್ಯೇಕ ನಾಡಧ್ವಜ ಕುರಿತು ಮುಖ್ಯಮಂತ್ರಿಗಳಿಂದ ತೀರ್ಮಾನ: ಸಚಿವ ವಿ.ಸೋಮವಣ್ಣ

Update: 2019-11-01 18:16 GMT

ಮೈಸೂರು,ನ.1: ಪ್ರತ್ಯೇಕ ನಾಡಧ್ವಜಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯಲ್ಲಿರುವ ಭುನೇಶ್ವರಿ ದೇವಿಗೆ ಶುಕ್ರವಾರ  64ನೇ ಕನ್ನಡ ರಾಜ್ಯೋತ್ಸವದ ವಿಶೇಷ ಪೂಜೆ ಸಲ್ಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರತ್ಯೇಕ ನಾಡಧ್ವಜ ಕುರಿತು ಕನ್ನಡ ಪರ ಹೋರಾಟಗಾರರು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಕರವೇ ನಾರಾಯಣಗೌಡ ಸೇರಿದಂತೆ ವಿವಿಧ ಸಂಘಟನೆಗಳ ಜೊತೆ ಮುಖ್ಯಮಂತ್ರಿಗಳು ಚರ್ಚೆ ಮಾಡಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಕನ್ನಡ ರಾಜ್ಯೋತ್ಸವದಲ್ಲಿ ರಾಷ್ಟ್ರಧ್ವಜ ಹಾರಿಸುವ ಆದೇಶದ ಕುರಿತು ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ, ಮೊದಲು ರಾಷ್ಟ್ರ ಧ್ವಜ ಹಾರಿಸಿ ನಂತರ ಭುವನೇಶ್ವರಿ ತಾಯಿ ಧ್ವಜ ಹಾರಿಸಲಾಗುತ್ತದೆ. ರಾಜ್ಯದ ಮೂಲೆ ಮೂಲೆಯಲ್ಲಿ ಎರಡೂ ಧ್ವಜ ಹಾರಿಸಲಾಗುತ್ತದೆ ಎಂದು ಹೇಳಿದರು.

ಮೈಸೂರು ನಾಡಹಬ್ಬ ದಸರಾದ ಲೆಕ್ಕ ಕುರಿತು ಮಾತನಾಡಿದ ಸಚಿವ ವಿ.ಸೋಮಣ್ಣ, ನಾನು ತೆರದ ಪುಸ್ತಕ, ಜಿಲ್ಲಾಧಿಕಾರಿಗಳು ರಜೆ ಮೇಲೆ ತೆರಳಿದ್ದರಿಂದ ಲೆಕ್ಕ ಕೊಡುವ ವಿಚಾರದಲ್ಲಿ ತಡವಾಗಿದೆ. ಶೀಘ್ರದಲ್ಲಿಯೇ ನಾಡಹಬ್ಬ ದಸರಾದ ಲೆಕ್ಕ ಕೊಡುತ್ತೇನೆ ಎಂದು ಹೇಳಿದರು.

ಮಳೆಯಿಂದಾಗಿ ದಸರಾ ಕಾಮಗಾರಿಗಳು ತಡವಾಗಿದೆ. ಶೀಘ್ರವೇ ಗುಂಡಿ ಮುಚ್ಚುವ ಕಾರ್ಯವನ್ನು ಸಮರೋಪಾದಿಯಲ್ಲಿ ಮಾಡಲಾಗುವುದು. ಈ ಸಂಬಂಧ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಇದಕ್ಕೂ ಮೊದಲು ರಾಷ್ಟ್ರಧ್ವಜ ಮತ್ತು ನಾಡ ಧ್ವಜವನ್ನು ಹಾರಿಸಿ 64ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ನಾಡಿನ ಜನತೆಗೆ ಕೋರಿದರು. ನಂತರ ಭುವನೇಶ್ವರಿ ಮೂರ್ತಿಯನ್ನು ಹೊತ್ತ ರಥೋತ್ಸವ ಮತ್ತು ಕಲಾತಂಡಗಳ ಮೆರವಣಿಗೆಗೆ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಶಾಸಕರುಗಳಾದ ತನ್ವೀರ್ ಸೇಠ್, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮೇಯರ್ ಪುಷ್ಪಲತಾ ಜಗನ್ನಾಥ್, ಉಪಮೇಯರ್ ಶಫಿ ಅಹಮದ್, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News