ಯಡಿಯೂರಪ್ಪ ವಾಸ್ತವ ವಿಚಾರ ತಿಳಿಸಿದ್ದಾರೆ, ವಿಡಿಯೋ ವೈರಲ್ ಆಗಬಾರದಿತ್ತು: ಸಚಿವ ವಿ.ಸೋಮಣ್ಣ

Update: 2019-11-02 15:37 GMT

ಮೈಸೂರು,ನ.2: ಅನರ್ಹ ಶಾಸಕರ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿರುವ ವಿಡಿಯೋ ವೈರಲ್ ಆಗಿರುವುದು ನನ್ನ ಮನಸ್ಸಿಗೆ ಬಹಳ ನೋವು ತಂದಿದೆ ಎಂದು ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ವಾಸ್ತವ ವಿಚಾರ ತಿಳಿಸಿದ್ದಾರೆ. ವಿಡಿಯೋ ವೈರಲ್ ಆಗಬಾರದಿತ್ತು. ಅನರ್ಹ ಶಾಸಕರಿಂದಲೇ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದು, ಅವರು ಬಿಜೆಪಿ ಸೇರುತ್ತಾರೆ ಎಂದು ಹೇಳಿಲ್ಲ. ಅವರ ಪಕ್ಷದ ಅವ್ಯವಸ್ಥೆಯಿಂದ ರಾಜೀನಾಮೆ ನೀಡಿದ್ದಾರೆ. ಅದರಿಂದ ಸಹಜವಾಗಿ ನಮ್ಮ ಸರ್ಕಾರ ಬಂದಿದೆ ಎಂದಿದ್ದಾರೆ. ಅದನ್ನು ರೆಕಾರ್ಡ್ ಮಾಡಿ ವೈರಲ್ ಮಾಡಿರುವುದು ನೋವು ತಂದಿದೆ. ಈ ಪ್ರಕರಣವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸುತ್ತದೆ. ಶಿಸ್ತಿನ ಪಕ್ಷದಲ್ಲಿ ಈ ರೀತಿ ಆಗಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರದ ನೂರು ದಿನದ ಸಾಧನೆ ಬಗ್ಗೆ ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ ವಿ.ಸೋಮಣ್ಣ, ಕೈಲಾಗದವರು ಮೈ ಪರಚಿಕೊಂಡರು ಎಂಬತಾಗಿದೆ ಅವರ ಸ್ಥಿತಿ ಎಂದು ಹೇಳಿದರು.

ಸಿದ್ದರಾಮಯ್ಯ ನೂರು ದಿನದಲ್ಲಿ ಏನು ಮಾಡಿದ್ದರು? ಸಿದ್ದರಾಮಯ್ಯ ಅನುಭವದ ಕೊರತೆಯಿಂದ ಮಾತನಾಡುತ್ತಿದ್ದಾರಾ, ಉದ್ದೇಶಪೂರ್ವಕವಾಗಿ ಮಾತನಾಡುತ್ತಿದ್ದಾರಾ ಗೊತ್ತಿಲ್ಲ. ಅವರ ಅವಧಿಯಲ್ಲಿ ಏನಾಗಿತ್ತು ಅನ್ನೋದನ್ನು ಚರ್ಚೆ ಮಾಡಲಿ. ಅವರ ಕಾಲದಲ್ಲಿ ಬರಗಾಲ ಅವರಿಸಿತ್ತು. ನಮ್ಮ ಕಾಲದಲ್ಲಿ ರಾಜ್ಯ ಸುಭೀಕ್ಷೆಯಿಂದ ಕೂಡಿದೆ. ವರ್ಗಾವಣೆ ದಂಧೆ ಆರೋಪದ ಬಗ್ಗೆ ಚರ್ಚೆಯಾಗಲಿ. ನಾನು ಇದುವರೆಗೂ ಒಂದು ವರ್ಗಾವಣೆ ಪತ್ರಕ್ಕೂ ಸಹಿ ಹಾಕಿಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News