ಇರಾಕ್‌ನ ‘ರಾಜಕೀಯ ಕುಲೀನರ’ ವಿರುದ್ಧ ಬೃಹತ್ ಪ್ರತಿಭಟನೆ

Update: 2019-11-02 16:23 GMT

ಬಗ್ದಾದ್ (ಇರಾಕ್), ನ. 2: ಇರಾಕ್‌ನ ‘ರಾಜಕೀಯ ಕುಲೀನರು’ ಸರಕಾರದಿಂದ ಹೊರಬರಬೇಕೆಂದು ಆಗ್ರಹಿಸಿ ಸಾವಿರಾರು ಜನರು ಶುಕ್ರವಾರ ರಾಜಧಾನಿ ಬಗ್ದಾದ್‌ನ ಮಧ್ಯಭಾಗದಲ್ಲಿ ಜಮಾಯಿಸಿದರು. ಇದು ಸದ್ದಾಮ್ ಹುಸೇನ್ ಪತನದ ಬಳಿಕ ಇರಾಕ್‌ನಲ್ಲಿ ನಡೆದ ಅತಿ ದೊಡ್ಡ ಸರಕಾರ-ವಿರೋಧಿ ಪ್ರತಿಭಟನೆಯಾಗಿದೆ.

ಬಗ್ದಾದ್‌ನ ತಹ್ರೀರ್ ಚೌಕದಲ್ಲಿ ಸೇರಿದ ಭಾರೀ ಸಂಖ್ಯೆಯ ಪ್ರತಿಭಟನಕಾರರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಮತ್ತು ರಬ್ಬರ್ ಗುಂಡುಗಳನ್ನು ಪ್ರಯೋಗಿಸಿದರು.

ಈ ಸಂದರ್ಭದಲ್ಲಿ ಅಶ್ರುವಾಯು ಶೆಲ್ಲೊಂದು ತಲೆಗೆ ಬಡಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಇರಾಕ್‌ನ ಮಾನವಹಕ್ಕುಗಳ ಆಯೋಗ ತಿಳಿಸಿದೆ. ಕನಿಷ್ಠ 155 ಮಂದಿ ಗಾಯಗೊಂಡಿದ್ದಾರೆ. ಇದೇ ರೀತಿಯ ಗಾಯಗಳಿಂದಾಗಿ ಗುರುವಾರ ರಾತ್ರಿ ಐವರು ಮೃತಪಟ್ಟಿದ್ದಾರೆ.

2003ರಿಂದಲೂ ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳನ್ನು ತಿರಸ್ಕರಿಸುವುದಕ್ಕಾಗಿ ಇರಾಕ್‌ನ ಪಂಗಡ ಮತ್ತು ಜನಾಂಗೀಯ ಭೇದಗಳ ಹೊರತಾಗಿಯೂ, ಇತ್ತೀಚಿನ ದಿನಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ.

ಶುಕ್ರವಾರ ಅಪರಾಹ್ನದ ವೇಳೆಗೆ, ತಹ್ರೀರ್ ಚೌಕದಲ್ಲಿ ಲಕ್ಷಾಂತರ ಮಂದಿ ಜಮಾಯಿಸಿದ್ದರು. ಅಧಿಕಾರದಲ್ಲಿರುವ ರಾಜಕೀಯ ಕುಲೀನರು ಕಡು ಭ್ರಷ್ಟರಾಗಿದ್ದಾರೆ, ವಿದೇಶಿ ಶಕ್ತಿಗಳ ವಶದಲ್ಲಿದ್ದಾರೆ ಹಾಗೂ ಜನರ ದೈನಂದಿನ ಬದುಕಿನ ಕಷ್ಟಗಳಿಗೆ ಕಾರಣರಾಗಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.

250 ಸಾವು

ಹಗಲು ಹೊತ್ತಿನಲ್ಲಿ ಶಾಂತ ರೀತಿಯಿಂದ ನಡೆದ ಪ್ರತಿಭಟನೆ, ಕತ್ತಲಾಗುತ್ತಿದ್ದಂತೆ ಹಿಂಸೆಗೆ ತಿರುಗಿತು. ಸ್ವಯಂಘೋಷಿತ ‘ಕ್ರಾಂತಿಕಾರಿ ಯುವಕರನ್ನು’ ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು ಹಾಗೂ ರಬ್ಬರ್ ಗುಂಡುಗಳನ್ನು ಹಾರಿಸಿದರು.

ಪ್ರತಿಭಟನೆಗಳ ವೇಳೆ ಈವರೆಗೆ ಕನಿಷ್ಠ 250 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News