ಕೇರಳದಲ್ಲಿ ಎನ್‌ಕೌಂಟರ್: ಮೃತ ಶಂಕಿತ ನಕ್ಸಲ್ ಮೂಡಿಗೆರೆಯ ಸುರೇಶ್ ಅಲ್ಲ; ದೃಢಪಡಿಸಿದ ಸಂಬಧಿಕರು

Update: 2019-11-02 16:23 GMT
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು, ನ.2: ಇತ್ತೀಚೆಗೆ ಕೇರಳದ ಪಾಲಕ್ಕಾಡ್‌ನಲ್ಲಿ ಎಎನ್‌ಎಫ್ ನಡೆಸಿದ ಎನ್‌ಕೌಂಟರ್‌ಗೆ ಬಲಿಯಾಗಿರುವ ನಾಲ್ವರು ಶಂಕಿತ ನಕ್ಸಲರ ಪೈಕಿ ಓರ್ವನ ಮೃತದೇಹ ಸಂಬಂಧ ಏರ್ಪಟ್ಟಿದ್ದ ಗೊಂದಲಕ್ಕೆ ತೆರೆ ಬಿದ್ದಿದ್ದು, ಕಾರ್ಯಾಚರಣೆಯಲ್ಲಿ ಬಲಿಯಾಗಿರುವ ಶಂಕಿತ ನಕ್ಸಲ್ ಮೂಡಿಗೆರೆಯ ಸುರೇಶ್ ಅಲ್ಲ ಎಂಬುದನ್ನು ಸುರೇಶ್ ಕುಟುಂಬಸ್ಥರು ಸ್ಪಷ್ಟಪಡಿಸಿದ್ದಾರೆ. 

ಎನ್‌ಕೌಂಟರ್‌ನಲ್ಲಿ ಮೃತಪಟ್ಟ ನಾಲ್ವರು ಶಂಕಿತ ನಕ್ಸಲರ ಪೈಕಿ ಇಬ್ಬರು ಕರ್ನಾಟಕದ ಚಿಕ್ಕಮಗಳೂರಿನವರೆಂದು ವದಂತಿ ಹರಿದಿತ್ತು. ಎನ್‌ಕೌಂಟರ್‌ನಲ್ಲಿ ಮೃತರಾದ ನಾಲ್ವರ ಪೈಕಿ ಓರ್ವ ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದ ಸುರೇಶ್ ಹಾಗೂ ಮತ್ತೋರ್ವ ಯುವತಿ ಶ್ರೀಮತಿ ಶೃಂಗೇರಿಯ ಬೆಳಗೋಡು ಕೂಡಿಗೆ ಗ್ರಾಮದವರೆಂದು ಆರಂಭದಲ್ಲಿ ವದಂತಿ ಹರಡಿತ್ತು. ಈ ವದಂತಿಗಳ ಹಿನ್ನೆಲೆಯಲ್ಲಿ ಮೂಡಿಗೆರೆಯ ಅಂಗಡಿ ಗ್ರಾಮದ ಸುರೇಶ್ ಹಾಗೂ ಶೃಂಗೇರಿಯ ಶ್ರೀಮತಿ ಕುಟುಂಬಸ್ಥರು ಕಂಗಾಲಾಗಿದ್ದರು. ನಂತರ ಚಿಕ್ಕಮಗಳೂರು ಎಸ್ಪಿ ಹರೀಶ್ ಪಾಂಡೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿ ಎನ್‌ಕೌಂಟರ್‌ನಲ್ಲಿ ಮೃತಪಟ್ಟವರೆಲ್ಲರೂ ತಮಿಳುನಾಡು ಮೂಲದವರು, ಕರ್ನಾಟಕದವರು ಯಾರೂ ಇಲ್ಲ ಎಂದು ತಿಳಿಸಿದ್ದರು.

ಈ ಘಟನೆಗಳ ಹಿನ್ನೆಲೆಯಲ್ಲಿ ಗೊಂದಲಕ್ಕೆ ಬಿದ್ದ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದ ಸುರೇಶ್ ಸಹೋದರ ಮಂಜುನಾಥ್ ಸೇರಿದಂತೆ ಮೂವರು ಚಿಕ್ಕಮಗಳೂರಿನ ವಕೀಲ ಹೂವಪ್ಪ ಹಾಗೂ ಹೋರಾಟಗಾರ ಅಂಗಡಿ ಚಂದ್ರ ಅವರೊಂದಿಗೆ ಮೃತದೇಹ ಯಾರದ್ದೆಂಬುದನ್ನು ದೃಢಪಡಿಸಿಕೊಳ್ಳಲು ಕೇರಳದ ತ್ರಿಶೂರ್‌ಗೆ ತೆರಳಿದ್ದರು. ಕೇರಳದ ತ್ರಿಶೂರ್‌ನ ಮೆಡಿಕಲ್ ಕಾಲೇಜಿನ ಶವಾಗಾರದಲ್ಲಿ ಇರಿಸಲಾಗಿರುವ ನಾಲ್ವರ ಮೃತದೇಹಗಳನ್ನು ಪರಿಶೀಲಿಸಿದ ಸುರೇಶ್ ಕಟುಂಬಸ್ಥರು, ಮೃತದೇಹಗಳು ಸುರೇಶ್‌ ನದ್ದಲ್ಲ ಎಂಬುದನ್ನು ಖಾತರಿಪಡಿಸಿಕೊಂಡು ಹಿಂದಿರುಗಿದ್ದಾರೆ.

ಕೇರಳದಲ್ಲಿ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿರುವ ನಾಲ್ವರ ಮೃತದೇಹಗಳು ತ್ರಿಶೂರ್‌ನ ಮೆಡಿಕಲ್ ಕಾಲೇಜು ಶವಾಗರದಲ್ಲೇ ಇದ್ದು, ಇದುವರೆಗೂ ಮೃತರ ಸಂಬಂಧಿಗಳು ಮೃತದೇಹಗಳನ್ನು ಕೊಂಡೊಯ್ಯಲು ಆಗಮಿಸಿಲ್ಲ. ಈ ಪೈಕಿ ಮಣಿ ವಸಿಗಂ ಅವರ ಪತ್ನಿ ಹಾಗೂ ಮಗಳು ಸೆರೆಮನೆಯಲ್ಲಿದ್ದು ಪೆರೋಲ್ ಮೇಲೆ ಹೊರಬಂದು ಮೃತದೇಹವನ್ನು ಕೊಂಡೊಯ್ಯಲಿದ್ದಾರೆ. ಮೃತರ ಸಂಬಂಧಿಗಳು ಶವಗಳನ್ನು ಕೊಂಡೊಯ್ಯುವವರೆಗೂ ಶವಾಗರದಲ್ಲೇ ನಾಲ್ಕು ದೇಹಗಳನ್ನು ಇರಿಸಬೇಕೆಂದು ಕೇರಳದ ಸ್ಥಳೀಯ ಸಂಘಟನೆಗಳ ಮುಖಂಡರು ನ್ಯಾಯಾಲಯದಿಂದ ಆದೇಶ ತಂದಿದ್ದಾರೆದು ಮೂಡಿಗೆರೆಯಿಂದ ಕೇರಳಕ್ಕೆ ತೆರಳಿದ್ದ ತಂಡ ವಾರ್ತಾಭಾರತಿಗೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News