ರಾಜೀನಾಮೆ ನೀಡಲು ಇಮ್ರಾನ್‌ ಖಾನ್‌ಗೆ 2 ದಿನಗಳ ಗಡುವು ನೀಡಿದ ‘ಆಝಾದಿ ಮಾರ್ಚ್’

Update: 2019-11-02 16:29 GMT

ಇಸ್ಲಾಮಾಬಾದ್, ನ. 2: ಪಾಕಿಸ್ತಾನದ ತೀವ್ರವಾದಿ ನಾಯಕ ಮೌಲಾನಾ ಫಝ್ಲುರ್ರಹ್ಮಾನ್, ಅಧಿಕಾರದಿಂದ ಕೆಳಗಿಳಿಯಲು ಪ್ರಧಾನಿ ಇಮ್ರಾನ್ ಖಾನ್‌ಗೆ ಶುಕ್ರವಾರ ಎರಡು ದಿನಗಳ ಗಡುವು ನೀಡಿದ್ದಾರೆ. ಶಾಂತಿಯುತ ಪ್ರತಿಭಟನಕಾರರ ಸಹನೆಯನ್ನು ಪರೀಕ್ಷಿಸದೆ ‘ಪಾಕಿಸ್ತಾನದ ಗೋರ್ಬಚೆವ್’ ರಾಜೀನಾಮೆ ನೀಡಬೇಕು ಎಂದು ಅವರು ಹೇಳಿದ್ದಾರೆ.

ಇಮ್ರಾನ್ ಖಾನ್ ಸರಕಾರವನ್ನು ಉರುಳಿಸುವ ಉದ್ದೇಶದಿಂದ ಇಸ್ಲಾಮಾಬಾದ್‌ನಲ್ಲಿ ನಡೆದ ಬೃಹತ್ ಪ್ರತಿಭಟನಾ ಸಮಾವೇಶ ‘ಆಝಾದಿ ಮಾರ್ಚ್’ನ್ನು ಉದ್ದೇಶಿಸಿ ಮಾತನಾಡಿದ ರೆಹಮಾನ್, ದೇಶವನ್ನು ಆಳಲು ಪಾಕಿಸ್ತಾನದ ಜನತೆಗೆ ಮಾತ್ರ ಅಧಿಕಾರವಿದೆ, ಯಾವುದೇ ‘ಸಂಸ್ಥೆ’ಗಲ್ಲ ಎಂದು ಹೇಳಿದರು.

ರೆಹಮಾನ್ ನೇತೃತ್ವದ ಜಮೀಯತ್ ಉಲೇಮಾ-ಎ-ಇಸ್ಲಾಮ್-ಫಝ್ಲಾ (ಜೆಯುಐ-ಎಫ್) ಮುಂದಾಳುತ್ವದ ಬೃಹತ್ ಪ್ರತಿಭಟನಾ ಮೆರವಣಿಗೆಯು ಗುರುವಾರ ಇಸ್ಲಾಮಾಬಾದ್ ತಲುಪಿದೆ. ಸಿಂಧ್ ಪ್ರಾಂತದಲ್ಲಿ ಆರಂಭಗೊಂಡ ಮೆರವಣಿಗೆಯು ಬುಧವಾರ ಲಾಹೋರ್‌ನಿಂದ ಹೊರಟಿತ್ತು.

ನವಾಝ್ (ಪಿಎಂಎಲ್-ಎನ್), ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ, ಅವಾಮಿ ನ್ಯಾಶನಲ್ ಪಾರ್ಟಿ ಮುಂತಾದ ಪ್ರತಿಪಕ್ಷಗಳ ನಾಯಕರೂ ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ.

‘‘ಕಳೆದ ವರ್ಷದ ಜುಲೈ 25ರಂದು ನಡೆದ ಚುನಾವಣೆ ಮೋಸದ ಚುನಾವಣೆಯಾಗಿತ್ತು. ಆ ಚುನಾವಣೆಯ ಫಲಿತಾಂಶವನ್ನಾಗಲಿ, ಆ ಮೂಲಕ ಅಧಿಕಾರಕ್ಕೆ ಬಂದ ಸರಕಾರವನ್ನಾಗಲಿ ನಾವು ಮಾನ್ಯ ಮಾಡುವುದಿಲ್ಲ. ನಾವು ಈ ಸರಕಾರಕ್ಕೆ ಒಂದು ವರ್ಷ ನೀಡಿದ್ದೇವೆ. ಇನ್ನೂ ಹೆಚ್ಚಿನ ಸಮಯವನ್ನು ನೀಡುವುದು ಸಾಧ್ಯವಿಲ್ಲ’’ ಎಂದರು.

‘‘ಪಾಕಿಸ್ತಾನದ ಗೋರ್ಬಚೆವ್ ಹೋಗಬೇಕು. ರಾಜೀನಾಮೆ ನೀಡಲು ಇಮ್ರಾನ್ ಖಾನ್‌ಗೆ ನಾವು ಎರಡು ದಿನಗಳ ಗಡುವು ನೀಡುತ್ತೇವೆ. ಬಳಿಕ, ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸುತ್ತೇವೆ’’ ಎಂದು ಫಝ್ಲುರ್ರಹ್ಮಾನ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News