ಸಿದ್ದು, ಎಚ್ಡಿಕೆ ರಾಜ್ಯದ ಬೊಕ್ಕಸ ಖಾಲಿ ಮಾಡಿದ್ದರು: ಸಂಸದೆ ಶೋಭಾ

Update: 2019-11-02 18:03 GMT

ಚಿಕ್ಕಮಗಳೂರು, ನ.2: ರಾಜ್ಯ ಸರಕಾರ 100 ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಸಮಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ್ದಾರೆ ಎಂದು ಸಂಸದೆ ಶೋಭ ಕರಂದ್ಲಾಜೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 100 ದಿನಗಳಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾದಾಗಲೆಲ್ಲ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತದೆ. ಈ ಮಾತನ್ನು ರಾಜ್ಯದ ಜನತೆ ಆಡುತ್ತಿದ್ದು, ಇದು ಸತ್ಯವೂ ಆಗಿದೆ ಎಂದು ಹೊಗಳಿದ ಅವರು, ಸಿಎಂ ಸವಾಲುಗಳನ್ನು ಅತ್ಯಂತ ಸಮರ್ಥವಾಗಿ ಎದುರಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿದ್ದರು. ಅಂತಹ ಪರಿಸ್ಥಿತಿಯಲ್ಲಿಯೂ ಅತಿವೃಷ್ಟಿ ಪರಿಹಾರ ಕಾರ್ಯಗಳನ್ನು ರಾಜ್ಯ ಸರಕಾರ ಸಮರ್ಥವಾಗಿ ಮಾಡಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಸೇರಿ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಕೊಡಲಿದೆ ಎಂದು ಹೇಳಿದರು.

ಈಗಾಗಲೆ ಅತಿವೃಷ್ಟಿಯಿಂದ ತೊಂದರೆಗೆ ಸಿಲುಕಿರುವವರಿಗೆ ತಾತ್ಕಾಲಿಕ ಪರಿಹಾರವನ್ನು ಕೊಡಲಾಗಿದೆ. ಶಾಶ್ವತ ಪರಿಹಾರ ಕಾಮಗಾರಿ ಕೈಗೊಳ್ಳಲು ಕನಿಷ್ಠ 1 ವರ್ಷ ಬೇಕಾಗುತ್ತದೆ. ಆ ಕೆಲಸವನ್ನೂ ಮಾಡಲಾಗುವುದು. ಮುಖ್ಯಮಂತ್ರಿಯಾಗಿ 1 ತಿಂಗಳು ಯಡಿಯೂರಪ್ಪ ಅವರು ಏಕಾಂಗಿಯಾಗಿಯೇ ರಾಜ್ಯಾದ್ಯಂತ ಪ್ರವಾಸ ಮಾಡಿ ಸಮರ್ಥವಾಗಿ ಕೆಲಸ ಮಾಡಿದ್ದಾರೆ. ಸಚಿವ ಸಂಪುಟ ವಿಸ್ತರಣೆಯಾದ ನಂತರ ಸಚಿವರೂ ಸೇರಿ ರಾಜ್ಯದೆಲ್ಲೆಡೆ ಅತಿವೃಷ್ಟಿ ಪರಿಹಾರ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದರು.

ಆಡಳಿತದಲ್ಲಿ ಪರ್ಶಿಯನ್ ಪದಗಳ ಬಳಕೆ ಕುರಿತು ಗಮನ ಸೆಳೆದಾಗ, ತಜ್ಞರಿಂದ ವರದಿ ತರಿಸಿಕೊಂಡು ಆ ಪದಕ್ಕೆ ಪರ್ಯಾಯವಾದ ಕನ್ನಡ ಪದಗಳನ್ನು ಹಾಕಬೇಕಾಗಿದೆ. ಬೆಂಗಳೂರಿನಲ್ಲಿ ರಸ್ತೆಗಳಿಗೆ ಬ್ರಿಟಿಷರ ಹೆಸರಿಗಳಿದ್ದು, ಅವುಗಳ ಸ್ಥಾನದಲ್ಲಿ ಕನ್ನಡಕ್ಕಾಗಿ ದುಡಿದು, ಮಡಿದಿರುವ ವ್ಯಕ್ತಿಗಳ ಹೆಸರನ್ನು ಹಾಕಬೇಕಿದೆ. ಸಿಬಿಎಸ್‌ಸಿ ಮತ್ತು ಐಸಿಎಸ್‌ನಲ್ಲಿ ಕನ್ನಡ ಕಲಿಯುತ್ತಿಲ್ಲ, ಅಲ್ಲಿ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಕಲಿಯಬೇಕೆಂಬವಾದ ಇದೆ ಎಂದು ಸಂಸದೆ ಶೋಭಾ ಇದೇ ವೇಳೆ ಹೇಳಿದರು.

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದದ ಕುರಿತು ಪ್ರತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ನಾವು ಆರ್‌ಸಿಇಪಿ ಪರವಾಗಿಲ್ಲ, ರೈತರ ಪರವಾಗಿದ್ದೇವೆ. ರೈತರಿಗೆ ಅನುಕೂಲವಾಗುವ ಹಾಗೆ ಏನು ಮಾಡಬಹುದೋ ಅದನ್ನು ಮಾಡುತ್ತೇವೆ. ನಮ್ಮ ದೇಶದಲ್ಲಿ ರೈತರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಹಾಗೂ ಭಾವನಾತ್ಮಕ ವಿಚಾರಗಳಿಗೆ ಒತ್ತು ಕೊಟ್ಟಿದೆ. ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿದ್ದ ಟಿಪ್ಪು ಜಯಂತಿಯನ್ನು ರದ್ದುಪಡಿಸಿದೆ. ಜಿಲ್ಲೆಗೂ ಸರಕಾರ ಸಾಕಷ್ಟು ಕೊಡುಗೆ ಕೊಟ್ಟಿದೆ. ಕೇಂದ್ರ ಸರಕಾರದ ಸಹಯೋಗದಲ್ಲಿ ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿದೆ. ಅಡಕೆ ಬೆಳೆಗಾರರ ನೆರವಿಗೆ ಸರಕಾರ ಮುಂದಾಗಿದ್ದು, ಅಡಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬುದನ್ನು ಪತ್ತೆ ಹಚ್ಚಲು ಸಮಿತಿ ರಚಿಸಿದೆ. ಕಾಫಿ ಬೆಳೆಗಾರರ ನೆರವಿಗೂ ಧಾವಿಸಿದೆ. ಹಲವು ದಶಕಗಳ ಸಮಸ್ಯೆಯಾಗಿದ್ದ ಕಳಸಾ ಇನಾಂ ಭೂಮಿ ವಿಚಾರದಲ್ಲಿ ರೈತರ ನೆರವಿಗೆ ನಿಂತಿದೆ. ಅರಣ್ಯ ಇಲಾಖೆಗೆ ಪರ್ಯಾಯ ಭೂಮಿ ಕೊಟ್ಟು ರೈತರನ್ನು ಒಕ್ಕಲೆಬ್ಬಿಸುವುದನ್ನು ತಡೆಯುವುದಾಗಿ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಲು ಸಿಎಂ ಈಗಾಗಲೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News