ನಮ್ಮ ಮೇಲೆ ದಾಳಿ ಮಾಡಿದವರ ಜೊತೆಗೂ ಸ್ನೇಹ ಹಸ್ತ ಚಾಚುವುದು ನಮ್ಮ ದೌರ್ಬಲ್ಯವಲ್ಲ: ಮೈಸೂರಿನಲ್ಲಿ ವೆಂಕಯ್ಯ ನಾಯ್ಡು

Update: 2019-11-02 18:22 GMT

ಮೈಸೂರು,ನ.2: ದೇಶದ ಏಳಿಗೆಗೆ ವಿದ್ಯಾರ್ಥಿಗಳ ಪಾತ್ರ ದೊಡ್ಡದು. ಎಲ್ಲೆ ಹೋಗಿ ಏನೇ ಮಾಡಿ ನಿಮ್ಮ ತಾಯಿ ನಾಡಿಗಾಗಿ ದುಡಿಯಿರಿ ಎಂದು ವಿದ್ಯಾರ್ಥಿಗಳಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕರೆ ನೀಡಿದರು.

ಮೈಸೂರಿನ ಜೆ.ಎಸ್.ಎಸ್ ಉನ್ನತ ಮತ್ತು ಸಂಶೋಧನಾ ಅಕಾಡಮಿ ವತಿಯಿಂದ ಶನಿವಾರ ಆಯೋಜಿಸಿದ್ದ ದಶಮ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. "ಎಲ್ಲರಿಗು ನಮಸ್ಕಾರ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನಗೆ ಬಹಳ ಸಂತೋಷವಾಗಿದೆ. ಪದಕ ಪಡೆದ ಎಲ್ಲರಿಗೂ ನನ್ನ ಅಭಿನಂದನೆ ಸಲ್ಲಿಸುತ್ತೇನೆ. ನಿಮ್ಮ ಭವಿಷ್ಯದ ಬಗ್ಗೆ ನನ್ನ ಶುಭಾಶಯಗಳು ತಿಳಿಸುತ್ತೇನೆ" ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದರು.

ಮೈಸೂರು ಒಂದು ಸುಂದರವಾದ ಮತ್ತು ಅಷ್ಟೇ ಸುಂದರವಾದ ಸ್ವಚ್ಚ ನಗರ. ನಿಮ್ಮ ಪಾತ್ರ ದೇಶದ ಏಳಿಗೆಯಲ್ಲಿ ಪ್ರಮುಖವಾದದ್ದು. ಪಾಶ್ಚಾತ್ಯ ದೇಶಗಳಂತೆ ವೈದ್ಯಕೀಯ ಕ್ಷೇತ್ರಗಳಲ್ಲಿ ಭಾರತವು ಮುನ್ನುಗುತ್ತಿದೆ. ವಿಶ್ವದ ಹತ್ತು ಪ್ರಮುಖ ವೈದ್ಯರಲ್ಲಿ ಶೇ.50ರಷ್ಟು ಭಾರತೀಯ ವೈದ್ಯರು ಅನ್ನುವುದೆ ಹೆಮ್ಮೆ ಎಂದು ಹೇಳಿದರು.

ಭಾರತದಲ್ಲಿ ಉತ್ತಮ ಆಹಾರ ಸಿಗುತ್ತಿದೆ. ಅದರಲ್ಲೂ ಕರ್ನಾಟಕದಲ್ಲಿ ರಾಗಿ ಮುದ್ದೆಯಂತಹ ಆರೋಗ್ಯಕರ ಆಹಾರ ಭಾರತದಾಂತ್ಯದ ಪ್ರಸಿದ್ಧ. ನಿಮ್ಮ ಸಮಾಜದಲ್ಲಿ ಉತ್ತಮ ಆಹಾರ, ಉತ್ತಮ ಜೀವನದ ಬಗ್ಗೆ ತಿಳುವಳಿಕೆ ಮೂಡಿಸುವ ಕೆಲಸಗಳನ್ನ ಮಾಡಿ ಎಂದು ತಿಳಿಸಿದರು.

ನಾವು ಯಾವ ದೇಶದ ಮೇಲೂ ದಾಳಿ ಮಾಡಿಲ್ಲ. ಆದರೆ ನಮ್ಮ ದೇಶದ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದಾರೆ. ನಮಗೆ ಮೋಸ ಮಾಡಿದ್ದಾರೆ, ದ್ರೋಹ ಮಾಡಿದ್ದಾರೆ. ಆದರೆ ನಮ್ಮ ಪಕ್ಕದ ರಾಷ್ಟ್ರ ಭಯೋತ್ಪಾದನೆ ಮಾಡುತ್ತಿದೆ. ನಮ್ಮ ಮೇಲೆ ದಾಳಿ ಮಾಡಿದವರ ಜೊತೆಯಲ್ಲೂ ಸ್ನೇಹ ಹಸ್ತ ಚಾಚುತ್ತೇವೆ. ಅದು ನಮ್ಮ ದೌರ್ಬಲ್ಯವಲ್ಲ. ಎಲ್ಲರೂ ಸ್ನೇಹದಿಂದ ಇರಬೇಕು ಎಂಬುದು ನಮ್ಮ ಮನೋಧರ್ಮ. ಅನ್ಯ ದೇಶಗಳು ನಮ್ಮ ವಿಚಾರದಲ್ಲಿ ಮೂಗು ತೂರಿಸುವುದನ್ನು ಸಹಿಸುವುದಿಲ್ಲ. ಸ್ನೇಹಿತರನ್ನು ಬದಲಾಯಿಸಬಹುದು. ಆದ್ರೆ ಪಕ್ಕದ ರಾಷ್ಟ್ರಗಳನ್ನ ಬದಲಾಯಿಸಲು ಸಾಧ್ಯವಿಲ್ಲ. ಎಲ್ಲರೂ ಸ್ನೇಹದಿಂದಿರಬೇಕು. ವೈರತ್ವದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಜಮ್ಮು ಕಾಶ್ಮೀರದಲ್ಲಿ 370 ನೇ ವಿಧಿ ರದ್ದತಿಗೆ ನಿರೀಕ್ಷೆಗೂ ಮೀರಿ ಬೆಂಬಲ ಸಿಕ್ಕಿತು. ರಾಜ್ಯಸಭೆಯಲ್ಲಿ ಆಡಳಿತ ಪಕ್ಷಕ್ಕೆ ಬಹುಮತ ಇರಲಿಲ್ಲ. ಆದರೂ ಅಲ್ಲಿ ಮೂರನೇ ಎರಡರಷ್ಟು ಬಹುಮತ ಸಿಕ್ಕಿತು. ಆ ಕ್ಷಣ ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ ಎಂದು ಹೇಳಿದರು.

ಭಾರತದಲ್ಲಿ ಶೇ.80ರಷ್ಟು ಮಂದಿ ರೇಖೆಗಿಂತ ಕೆಳಗಿದ್ದಾರೆ. ಶೇ.20 ರಷ್ಟು ಮಂದಿ ಅನಕ್ಷರಸ್ಥರಿದ್ದಾರೆ. ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದೆ, ಅಸ್ಪೃಶ್ಯತೆ ಆಚರಣೆ ನಡೆಯುತ್ತಿದೆ. ಇವುಗಳ ವಿರುದ್ಧ ಧ್ವನಿ ಎತ್ತಬೇಕು ಮತ್ತು ಅವುಗಳನ್ನು ನಿಯಂತ್ರಿಸುವಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕು. ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಬೇಕು. ಪ್ರತಿಯೊಬ್ಬರು ಮಾತೃಭಾಷೆಯನ್ನು ಪೋಷಿಸಬೇಕು ಮತ್ತು ಅದರಲ್ಲಿಯೇ ವ್ಯವಹರಿಸಬೇಕು. ಅಂತೆಯೇ ಎಲ್ಲಾ ಭಾಷೆಯನ್ನು ಕಲಿಯುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು.

ಇದಕ್ಕೂ ಮೊದಲು ಘಟಿಕೋತ್ಸವದಲ್ಲಿ 934 ವಿದ್ಯಾರ್ಥಿನಿಯರು ಮತ್ತು 734 ಪುರಷರು ಸೇರಿ ಈ ವರ್ಷ ಒಟ್ಟು 1668 ಮಂದಿ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಪದವಿ ಪಡೆದರು. ಘಟಿಕೋತ್ಸವದಲ್ಲಿ 43 ವಿದ್ಯಾರ್ಥಿಗಳು ಒಟ್ಟು 60 ಚಿನ್ನದ ಪದಕಗಳನ್ನು ಮತ್ತು ಪ್ರಶಸ್ತಿಯನ್ನುತಮ್ಮದಾಗಿಸಿಕೊಂಡರು. 52 ವಿದ್ಯಾರ್ಥಿಗಳು ಪಿಎಚ್‌ಡಿ ಪದವಿ ಮತ್ತು 6 ವಿದ್ಯಾರ್ಥಿಗಳು ವೈದ್ಯಕೀಯ ಸೂಪರ್ ಸ್ಪಷಾಲಿಟಿ ಪದವಿ ಪಡೆದರು. 

ಘಟಿಕೋತ್ಸವದ ಸಾನಿಧ್ಯವನ್ನು ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ಸಂಸ್ಥೆಯ ಸಲಹಾಮಂಡಳಿ ಸದಸ್ಯ ಡಾ.ಶಿವರಾಜ್ ವಿ.ಪಾಟೀಲ್, ಸಮ ಕುಲಾಧಿಪತಿ ಡಾ.ಬಿ.ಸುರೇಶ್, ಕಲಪತಿ ಡಾ.ಎಚ್.ಬಸವನಗೌಡಪ್ಪ, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟ್‌ಸೂರ್‌ಮಠ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಆರ್.ಸುಧೀಂದ್ರ, ಕುಲಸಚಿವ ಡಾ.ಬ.ಹಿ.ಮಂಜುನಾಥ್, ಶೈಕ್ಷಣಿಕ ನಿರ್ದೇಶಕ ಡಾ.ಕುಶಾಲಪ್ಪ, ಜೆಎಸ್‌ಎಸ್ ದಂತ ಕಾಲೇಜಿನ ಪ್ರಾಂಶುಪಾಲ ರವೀಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News