ಬಿಎಸ್‌ವೈ, ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ರಾಜ್ಯದೆಲ್ಲೆಡೆ ಪ್ರತಿಭಟನೆ: ದಿನೇಶ್ ಗುಂಡೂರಾವ್

Update: 2019-11-03 12:16 GMT

ಬೆಂಗಳೂರು, ನ.3: ಅನರ್ಹ ಶಾಸಕರ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿರುವ ಆಡಿಯೋವನ್ನು ಬಿಜೆಪಿಯೇ ಹೊರತಂದಿದ್ದು, ಈ ಸಂಬಂಧ ರಾಜ್ಯ ಸರಕಾರವನ್ನು ವಜಾಗೊಳಿಸಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ರಾಜ್ಯದೆಲ್ಲೆಡೆ ಇಂದಿನಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ರವಿವಾರ ನಗರದ ಕ್ವೀನ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಸಭೆಯೊಂದರಲ್ಲಿ ಅನರ್ಹರ ಶಾಸಕರ ರಾಜೀನಾಮೆ ನೀಡಿ, ಬಿಜೆಪಿ ಸರಕಾರ ರಚನೆ ಮಾಡಿದೆ ಎಂದು ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಗಮನಕ್ಕೆ ತರಲಿದ್ದು, ಜತೆಗೆ ಇಂದಿನಿಂದ ಜಿಲ್ಲಾವಾರು ಪ್ರತಿಭಟನೆ ನಡೆಸುವ ಮೂಲಕ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಒಪ್ಪಂದ ಬೇಡ: ಕೇಂದ್ರದ ಪ್ರಧಾನಿ ಮೋದಿ ಸರಕಾರ ಯಾವುದೇ ಸಾಧಕ ಬಾಧಕಗಳನ್ನು ಚರ್ಚೆ ನಡೆಸದೆ, ಪ್ರಾದೇಶಿಕ ಸಮಗ್ರ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದಕ್ಕೆ ಮುಂದಾಗಿದೆ. ಇದರಿಂದ ಭಾರತಕ್ಕೆ ತೀವ್ರ ಹಾನಿಯಾಗಲಿದ್ದು, ಒಂದು ವೇಳೆ ಒಪ್ಪಂದ ನಡೆದರೆ ನಾಳೆಯಿಂದಲೇ ಬೃಹತ್ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ನೀಡಿದ ಯಾವ ಭರವಸೆ ಸಹ ಇದುವರೆಗೂ ಈಡೇರಲಿಲ್ಲ. ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಐಸಿಯುನಲ್ಲಿದ್ದಂತಿದೆ ಎಂದ ಅವರು, ಆರ್‌ಬಿಐನಲ್ಲಿರುವ ಚಿನ್ನವನ್ನೇ ಮಾರಾಟ ಮಾಡಲು ಮುಂದಾಗಿರುವುದು ದುರಂತದ ಸಂಗತಿ. ಇದು ದೇಶ ಯಾವ ಮಟ್ಟಕ್ಕೆ ಹೋಗುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News