ಅನರ್ಹ ಶಾಸಕರಿಗೆ ಟಿಕೆಟ್ ನೀಡುತ್ತೇವೆ ಎಂದು ಎಲ್ಲೂ ಹೇಳಿಲ್ಲ: ಸಚಿವ ಜಗದೀಶ್ ಶೆಟ್ಟರ್

Update: 2019-11-03 13:16 GMT

ಹುಬ್ಬಳ್ಳಿ, ನ. 3: ಬಿಜೆಪಿ ಸರಕಾರವನ್ನು ವಿರೋಧಿಸಲು ಯಾವುದೇ ವಿಚಾರಗಳಿಲ್ಲದ ಕಾರಣ ಕಾಂಗ್ರೆಸ್ ಸಿಎಂ ಬಿಎಸ್‌ವೈ ಅವರದು ಎನ್ನಲಾದ ಸುಳ್ಳು ಆಡಿಯೋವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಬಿಡುಗಡೆ ಮಾಡಿದವರು ಯಾರು? ಅದನ್ನು ಸೃಷ್ಟಿಸಿದವರು ಯಾರು? ಎಂಬುದನ್ನು ಕಾಂಗ್ರೆಸ್ ಪಕ್ಷವೇ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ಅಪಪ್ರಚಾರ ಮಾಡಲು ವಿಪಕ್ಷ ನಾಯಕ ಸಿದ್ದರಾಮಯ್ಯ ಕುತಂತ್ರ ನಡೆಸಿದ್ದಾರೆ. ಅಲ್ಲದೆ, ಸುಳ್ಳು ಆಡಿಯೋ ಸೃಷ್ಟಿಸಿ ರಾಜ್ಯದ ಜನತೆ ಗಮನ ಬೇರೆಡೆ ಸೆಳೆಯುತ್ತಿದ್ದಾರೆ. ಹೀಗೆ ಅವರು ಮುಂದುವರೆದರೆ ಕಾಂಗ್ರೆಸ್ ಉಳಿಯಲು ಸಾಧ್ಯವಿಲ್ಲ ಎಂದರು.

ಅವರ ಜವಾಬ್ದಾರಿ ನಮ್ಮದಲ್ಲ: ಕಾಂಗ್ರೆಸ್-ಜೆಡಿಎಸ್‌ನ ಅತೃಪ್ತ ಶಾಸಕರ ರಾಜೀನಾಮೆಯಿಂದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಆದರೆ, ಆ ಶಾಸಕರ ರಕ್ಷಣೆಯ ಹೊಣೆ ನಮ್ಮದಲ್ಲ. ವೈಯಕ್ತಿಕ ಕಾರಣಗಳಿಂದಾಗಿ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಈಗ ಅನರ್ಹರಾಗಿದ್ದಾರೆ ಎಂದು ಶೆಟ್ಟರ್ ಹೇಳಿದರು.

ಶಾಸಕರ ರಾಜೀನಾಮೆಯಿಂದ ಬಿಜೆಪಿಗೆ ಸರಕಾರ ರಚಿಸಲು ಅನುಕೂಲವಾಗಿದೆ. ಹಾಗೆಂದು ಅವರನ್ನು ರಕ್ಷಿಸುವ ಜವಾಬ್ದಾರಿ ನಮ್ಮದಲ್ಲ. ನಮ್ಮ ಮತ್ತು ಅವರ ನಡುವೆ ಸಾಕಷ್ಟು ರಾಜಕೀಯ ಅಂತರವಿದೆ ಎಂದ ಅವರು, ಅನರ್ಹ ಶಾಸಕರಿಗೆ ಉಪ ಚುನಾವಣೆ ಸ್ಪರ್ಧಿಸಲು ಟಿಕೆಟ್ ನೀಡುತ್ತೇವೆ ಎಂದು ಎಲ್ಲೂ ಹೇಳಿಲ್ಲ ಎಂದರು.

ಅನರ್ಹರು ಈಗಾಗಲೇ ಕೋರ್ಟ್ ಮೆಟ್ಟಿಲೇರಿದ್ದು, ನ.4 ಅಥವಾ 5ರಂದು ತೀರ್ಪು ಬರುವ ಸಾಧ್ಯತೆಯಿದೆ. ಮುಂದೆ ಅವರು ಬಿಜೆಪಿ ಸೇರಿದಲ್ಲಿ ಉಪ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುವ ಬಗ್ಗೆ ವರಿಷ್ಠರು ತೀರ್ಮಾನಿಸಿದ್ದಾರೆಂದು ಜಗದೀಶ್ ಶೆಟ್ಟರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News